ಚಾಮರಾಜನಗರ : ಕೇಂದ್ರ ಸರ್ಕಾರ ದೇಶದಲ್ಲಿ ಆನ್‌ಲೈನ್ ಗೇಮ್‌ಗಳನ್ನು ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದು ರೈತ ಸಂಘದ ಮುಖಂಡ ಹೆಗ್ಗವಾಡಿಪುರ ಮಹೇಶ್ ಕುಮಾರ್ ಹೇಳಿದರು.
ದೇಶದಾದ್ಯಂತ ಆನ್‌ಲೈನ್ ಗೇಮ್‌ಗಳಿಂದಲೇ ಸುಮಾರು 2 ಲಕ್ಷ ಕೋಟಿ ರೂ. ಜಿಎಸ್‌ಟಿ ಕೇಂದ್ರ ಸರ್ಕಾರಕ್ಕೆ ಬರುತ್ತಿತ್ತು. ಆದರೂ ಆನ್‌ಲೈನ್ ಗೇಮ್‌ಗಳನ್ನು ನಿಷೇಧ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಸಾಕಷ್ಟು ಬಡ ಮತ್ತು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವುದು ತಪ್ಪಲಿದೆ ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಕೋಟ್ಯಾಂತರ ಕುಟುಂಬಗಳು ಆನ್‌ಲೈನ್ ಗೇಮ್‌ಗಳ ಚಟಕ್ಕೆ ಸಿಲುಕಿ ಬೀದಿಗೆ ಬಂದಿದ್ದವು. ಹಲವು ಯುವಕರು ಆನ್‌ಲೈನ್ ಗೇಮ್‌ಗಳಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಜೀವಕ್ಕೆ ಕುಂದು ತಂದುಕೊಂಡಿದ್ದರು. ಆನ್‌ಲೈನ್ ಗೇಮ್ ನಿಷೇಧದಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಒಂದು ವೇಳೆ ಆನ್‌ಲೈನ್ ಗೇಮ್ ಮತ್ತೆ ಮುಂದುವರಿದರೇ ಅದರ ವಿರುದ್ಧ ಪ್ರಕರಣ ದಾಖಲಿಸಿ ಕೋಟಿ ರೂ. ದಂಡವನ್ನು ವಿಧಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಹೆಬ್ಬಸೂರು ಬಸವಣ್ಣ, ಕೂಡ್ಲೂರು ವೆಂಕಟೇಶ್, ಅಮ್ಜಾದ್ ಖಾನ್, ಮಣಿ, ಶಾಂತಿ, ಆಯಮ್ಮ ಹಾಜರಿದ್ದರು.