ಆನೇಕಲ್ ಬಸ್ ಡಿಪೋಗೆ ಸಂಚಕಾರ: ರಾಮನಗರ ಘಟಕಕ್ಕೆ ಸೇರಿದ ಬಳಿಕ ಮುಚ್ಚುವಂತಾದ ಸಾರಿಗೆ ಘಟಕ ಗುಜರಿ ಬಸ್‌ಗಳ ಕಾರುಬಾರು

13ank news and photos 03
Published on

ನವೀನ್‌ಚಂದ್ರ ಶೆಟ್ಟಿ

ಆನೇಕಲ್: ದೇಶದಲ್ಲಿ ಸಾರಿಗೆ ಸಂಸ್ಥೆ 1959-62 ರಲ್ಲಿ ರಾಷ್ಟ್ರೀಕರಣವಾದಾಗ ಗಡಿನಾಡ ಪ್ರಾಂತ್ಯದ ಅನುದಾನದಲ್ಲಿ ಪ್ರಾರಂಭವಾದ ಆನೇಕಲ್ ಘಟಕ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದಾಗಿ ಮುಚ್ಚುವ ಹಂತಕ್ಕೆ ತಲುಪಿದೆ.

ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆಯಾಗಿದ್ದ ಆನೇಕಲ್ ಘಟಕವನ್ನು ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಮನಗರದ ವಿಭಾಗಕ್ಕೆ ಸೇರಿಸಲಾಗಿತ್ತು. ಅಂದು 120ಕ್ಕೂ ಹೆಚ್ಚು ಮಾರ್ಗಗಳಿದ್ದ ಆನೇಕಲ್ ಘಟಕ ಪ್ರಸಕ್ತ ದಿನಗಳಲ್ಲಿ 64 ರೂಟ್‌ಗಳಿಗೆ ಸೀಮಿತವಾಗಿದೆ. ಅದರಲ್ಲಿ ಹೆಚ್ಚು ಬಸ್‌ಗಳು ತಮಿಳುನಾಡಿನ ಹೊಸೂರು ಬೆಂಗಳೂರು ಮಾರ್ಗದಲ್ಲಿ ಓಡಾಡುತ್ತಿವೆ. ರಾಮನಗರ ವಿಭಾಗದ ಮಲತಾಯಿ ಧೋರಣೆಯಿಂದ ಹೊಸ ಬಸ್‌ಗಳು ಹಾಗೂ ಮಾರ್ಗಗಳನ್ನು ಆನೇಕಲ್‌ಗೆ ಕೊಡುತ್ತಿಲ್ಲ. ಇರುವ ಮಾರ್ಗಗಳನ್ನೇ ಈ ಘಟಕದಿಂದ ಕಸಿದುಕೊಂಡು ಬೇರೆ ಘಟಕಗಳಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್ ಘಟಕ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಆನೇಕಲ್ ತಾಲೂಕು ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಈ ಭಾಗದಲ್ಲಿ ಪ್ರತಿದಿನ ಹಳ್ಳಿಗಳಿಗೆ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಬೇಕಿದೆ. ಆದರೆ ಇಂದಿಗೂ ಕೂಡ ಕೆಲವು ಹಳ್ಳಿಗಳಿಗೆ ಸರಿಯಾದ ಬಸ್ ಸಂಪರ್ಕ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಬಸ್‌ಗಳನ್ನು ಸ್ಥಗಿತ ಮಾಡಿದರೆ ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ಪ್ರದೇಶ ಹೆಚ್ಚಾಗಿರುವ ಆನೇಕಲ್ ತಾಲೂಕು ಕೇಂದ್ರಕ್ಕೆ ಕೆಲಸಕ್ಕೆ ಹೋಗಿಬರುವವರಿಗೂ ಭಾರಿ ತೊಂದರೆ ಎದುರಾಗಲಿದೆ.

ಆನೇಕಲ್ ಘಟಕ ಮೊದಲು ಬೆಂಗಳೂರು ಸೆಂಟ್ರಲ್ ಘಟಕದಡಿ ಕಾರ್ಯನಿರ್ವಹಿಸುತ್ತಿತ್ತು. 40 ಕಿಲೋ ಮೀಟರ್ ದೂರದ ಬೆಂಗಳೂರು ಸೆಂಟ್ರಲ್‌ನಲ್ಲಿದ್ದ ಘಟಕವನ್ನು 80 ಕಿಲೋಮೀಟರ್ ದೂರದ ರಾಮನಗರಕ್ಕೆ ನೀಡಿದ್ದು, ಕಚೇರಿ ಕೆಲಸಗಳಿಗೂ ತೊಂದರೆ ಎದುರಾಗಿದೆ.

ಆನೇಕಲ್‌ನಿಂದ ದೂರದ ನಗರಗಳಿಗೆ ತೆರಳುತ್ತಿದ್ದ ಕೆಲವೊಂದು ಬಸ್‌ಗಳನ್ನು ಹಲವು ಕಾರಣಗಳಿಂದಾಗಿ ಸ್ಥಗಿತ ಮಾಡಲಾಗಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಕೆಲವು ಮಾರ್ಗಗಳನ್ನು ಮತ್ತೆ ಪ್ರಾರಂಭ ಮಾಡಲಾಗಿದೆ. ಇನ್ನೂ ಕೆಲವು ಮಾರ್ಗಗಳನ್ನು ಪ್ರಾರಂಭ ಮಾಡಬೇಕಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಇದ್ದರೆ ಸೇವೆ ಕಲ್ಪಿಸಲಾಗುವುದು. ಬಿ ಶಿವಣ್ಣ ಶಾಸಕ ಆನೇಕಲ್ ಡಿಪೋದಲ್ಲಿ 202 ಸಿಬ್ಬಂದಿ ಇದ್ದಾರೆ. ಡಿಪೋವನ್ನು ರಾಮನಗರ ವಿಭಾಗ ಸೇರಿಸಿದ ಬಳಿಕ ಕಾರಣಾಂತರಗಳಿಂದ ಕೆಲವು ಮಾರ್ಗದ ಬಸ್‌ಗಳನ್ನು ನಿಲ್ಲಿಸಲಾಗಿದೆ, ಹಿರಿಯ ಅಧಿಕಾರಿಗಳು ಸೂಚಿಸಿದರೆ ಮತ್ತೆ ಪ್ರಾರಂಭ ಮಾಡುತ್ತೇವೆ ಹೆಸರು ಹೇಳಲಿಚ್ಛಿಸದ ಅಧಿಕಾರಿ

ದೂರದ ಮಾರ್ಗಕ್ಕೆ ತಡೆ

ಈ ಹಿಂದೆ ಆನೇಕಲ್ ಡಿಪೋದಿಂದ ವಿಜಯಪುರ, ಮಹದೇಶ್ವರ ಬೆಟ್ಟ, ಚೆನ್ನೈ, ವೈದ್ಯನಾಥೇಶ್ವರ, ಕುಶಾಲನಗರ, ಊಟಿ, ಬೀದರ್, ಕಡೂರು, ಮಂತ್ರಾಲಯ, ಮೈಸೂರು, ಕೈವಾರ, ಹೊಂಗದಾಳಕ್ಕೆ ನೇರವಾಗಿ ಬಸ್ ಸಂಪರ್ಕ ಇತ್ತು. ಆದರೆ ಇತ್ತೀಚೆಗೆ ಕೆಲವು ಕಾರಣ ನೀಡಿ ದೂರದ ನಗರಗಳಿಗೆ ತೆರಳುತ್ತಿದ್ದ ಬಸ್ ರೂಟ್‌ಗಳನ್ನು ಸ್ಥಗಿತ ಮಾಡಲಾಗಿದೆ.

74 ಬಸ್‌ಗಳಿಗೆ ಸೀಮಿತವಾದ ಡಿಪೋ

ಆನೇಕಲ್ ಘಟಕದಲ್ಲಿ 74 ಬಸ್‌ಗಳಿದ್ದು, ಅದರಲ್ಲಿ 64 ರೂಟ್‌ಗಳಿಗೆ ಪ್ರತಿ ದಿನ ಬಸ್‌ಗಳು ಸಂಚಾರ ಮಾಡುತ್ತಿವೆ. ಹಾಗೆಯೇ 74 ಬಸ್‌ಗಳಲ್ಲಿ 32 ಬಸ್‌ಗಳ ಸಂಚಾರ ತಮಿಳುನಾಡಿನಿಂದ ಹೊಸೂರು ಮೂಲಕ ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದು, ತಾಲೂಕಿನ ಹಳ್ಳಿಗಳಿಗೆ ಹಾಗೂ ಪಟ್ಟಣದಲ್ಲಿ ಕೇವಲ 42 ಬಸ್‌ಗಳು ಸಂಚಾರ ಮಾಡುತ್ತಿವೆ.

ಆದಾಯ ಕಡಿತ

ಆನೇಕಲ್ ಘಟಕದಲ್ಲಿ 2012-13ರಲ್ಲಿ ದಿನಕ್ಕೆ ಹತ್ತು ಲಕ್ಷ ಕಲೆಕ್ಷನ್ ಬರುತ್ತಿತ್ತು. ಪ್ರಸ್ತುತ ದಿನಕ್ಕೆ 6-7 ಲಕ್ಷ ಕಲೆಕ್ಷನ್ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೂ ನಮ್ಮ ಡಿಪೋವನ್ನು ರಾಮನಗರಕ್ಕೆ ಸೇರಿಸಿದರೂ ಈ ಬಗ್ಗೆ ಯಾರೊಬ್ಬರೂ ವಿರೋಧ ಮಾಡದಿರುವುದು ಬೇಸರದ ಸಂಗತಿ.ಬಿ.ನಾಗರಾಜು ಪುರಸಭೆ ಮಾಜಿ ಅಧ್ಯಕ್ಷ6 ವರ್ಷದಿಂದ ಹೊಸ ಬಸ್ ನೀಡಿಲ್ಲ

ಆನೇಕಲ್ ಘಟಕಕ್ಕೆ ಆರು ವರ್ಷಗಳಿಂದ ಯಾವುದೇ ಹೊಸ ಬಸ್‌ಗಳನ್ನು ಸಂಸ್ಥೆಯಿಂದ ನೀಡಿಲ್ಲ. ಹಳೇ ಬಸ್‌ಗಳನ್ನೇ ದುರಸ್ತಿ ಮಾಡಿ ಓಡಿಸುವ ಪರಿಸ್ಥಿತಿ ಇದ್ದು, ಬೆಂಗಳೂರಿಗೆ ಹತ್ತಿರದಲ್ಲಿ ಇದ್ದರೂ ಘಟಕದಲ್ಲಿ ನಿರ್ವಹಣೆ ಕೊರತೆಯಿಂದ ಪರದಾಡುವ ಸ್ಥಿತಿ ಎದುರಾಗಿದೆ.

ಬೆಂಗಳೂರು ಸೆಂಟ್ರಲ್‌ಗೆ ವರ್ಗಾವಣೆ ಮಾಡಿ

ರಾಮನಗರ ವ್ಯಾಪ್ತಿಗೆ ಸೇರಿದ ಮೇಲೆ ಆನೇಕಲ್ ಡಿಪೋ ದಿನದಿಂದ ದಿನಕ್ಕೆ ಮುಚ್ಚುವ ಹಂತಕ್ಕೆ ಹೋಗುತ್ತಿದ್ದು, ಈ ಹಿಂದಿನಂತೆ ಬೆಂಗಳೂರು ಸೆಂಟ್ರಲ್‌ನಡಿಯೇ ಆನೇಕಲ್ ಘಟಕ ನಿರ್ವಹಣೆಗೆ ಅನುಮತಿ ನೀಡಿದರೆ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗುತ್ತದೆ.

ಗುಜರಿ ಬಸ್‌ಗಳೇ ಹೆಚ್ಚು

ಕೆಎಸ್‌ಆರ್‌ಟಿಸಿಯಲ್ಲಿ 9 ಲಕ್ಷ ಕಿಲೋ ಮೀಟರ್ ಓಡಿದ ಬಳಿಕ ಬಸ್‌ಗಳನ್ನು ಗುಜರಿಗೆ ಹಾಕಬೇಕು ಎನ್ನುವ ನಿಯಮ ಇದೆ. ಆದರೆ ಆನೇಕಲ್ ಘಟಕದಲ್ಲಿ ಸಂಚಾರ ಮಾಡುತ್ತಿರುವ ಬಸ್‌ಗಳಲ್ಲಿ ಎರಡು ಬಸ್ 12 ಲಕ್ಷ, ನಾಲ್ಕು ಬಸ್ ಹನ್ನೊಂದು ಲಕ್ಷ, ನಾಲ್ಕು ಬಸ್ 10 ಲಕ್ಷ ಓಡಿದ್ದು, ಇಂತಹ ಬಸ್‌ಗಳಲ್ಲಿ ಸಂಚಾರ ಮಾಡಲು ಜನ ಭಯಪಡುವ ಸ್ಥಿತಿ ಇದ್ದರೆ ಚಾಲಕ, ನಿರ್ವಾಹಕರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net