ಆನೆಬಾಗಿಲು ಸಮೀಪ ಸುಂದರ ಉದ್ಯಾನ?

CMC
Published on

ಚಿತ್ರದುರ್ಗ: ನಗರದ ಆನೆಬಾಗಿಲು ಸಮೀಪದ ದೇವಾಲಯದ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಅನಗತ್ಯವಾಗಿ ಬೆಳದಿರುವ ಗಿಡಗಳನ್ನು ತೆರವುಗೊಳಿಸಿ, ಸುಂದರ ಉದ್ಯಾನ ನಿರ್ಮಿಸುವ ಸಂಬಂಧ ನಗರಸಭೆ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ನಗರಸಭಾಧ್ಯಕ್ಷೆ ಸುಮಿತಾ ಭರವಸೆ ನೀಡಿದರು.

ಸೋಮವಾರ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗ ಐತಿಹಾಸಿಕ ಹಿನ್ನಲೆ ಹೊಂದಿದೆ. ಹೀಗಾಗಿ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ರಾಜರು, ಪಾಳೆಗಾರರ ಕಾಲದಿಂದಲೂ ಈ ಬಾಗಿಲು ಪ್ರಮುಖ ಆಕರ್ಷಣೆಯಾಗಿದೆ. ಬಳಿಕ ಸಾರ್ವಜನಿಕರು, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಈ ಪ್ರದೇಶದಲ್ಲಿ ಹೇರಳವಾಗಿ ಅನಗತ್ಯ ಗಿಡಗಳು ಬೆಳೆದು, ಅದರ ಬೇರುಗಳು ಅರಸರ ಕಾಲದ ಕಟ್ಟಡಗಳನ್ನು ಶೀಥಿಲಗೊಳಿಸುತ್ತಿವೆ ಎಂದು ನಗರಸಭೆ ಸದಸ್ಯ ಶಶಿಧರ್, ಮದಕರಿ ನಾಯಕ ಸಾಂಸ್ಕೃತಿಕ ವೇದಿಕೆ ಗೋಪಾಲಸ್ವಾಮಿ ನಾಯಕ, ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲರಾವ್ ಜಾಧವ್ ಸೇರಿ ಇನ್ನಿತರರು ಮನವರಿಕೆ ಮಾಡಿದರು. ತ್ವರಿತವಾಗಿ ತೆರವುಗೊಳಿಸಿ, ಸುಂದರ ಉದ್ಯಾನ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಗೋಪಾಲಸ್ವಾಮಿ ನಾಯಕ ಮಾತನಾಡಿ, ಈ ಬಾಗಿಲ ಮೂಲ ಹೆಸರು ಸಂಪಿಗೆ ಸಿದ್ಧೇಶ್ವರ ಬಾಗಿಲು. ಆದರೆ, ಆನೆಬಾಗಿಲು ಎಂದು ಕರೆಯಲಾಗುತ್ತಿದೆ. ಇತಿಹಾಸ ತಿಳಿದಾಗ ಮಾತ್ರ ಪ್ರತಿಯೊಂದರ ಮಹತ್ವ ಅರಿಯಲು ಸಾಧ್ಯ ಎಂದರು.

ವಿಫುಲ್ ಜೈನ್, ರಾಜಕುಮಾರ್, ನಾಗರಾಜ್ ಬೇದ್ರೆ, ಹರ್ಷವರ್ಧನ್, ವಿದ್ಯಾನಂದ ಲಾಡ್, ಶ್ಯಾಮಸುಂದರ್, ಮಹಾವೀರ ಜೈನ್, ಶ್ರೀಣಿಕ್ ಜೈನ್, ಸೋಮಶೇಖರ್, ಅಜೇಯ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net