

ಕುಶಾಲನಗರ: ಸಮೀಪದ ಹಾರಂಗಿ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆಯಿಂದ ಶನಿವಾರ ವಿಶ್ವ ಆನೆ ದಿನವನ್ನು ಆಚರಿಸಲಾಯಿತು.
ಶಿಬಿರದ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಹಣ್ಣುಹಂಪಲುಗಳನ್ನು ತಿನಿಸಲಾಯಿತು. ದಿನದ ಅಂಗವಾಗಿ ಶಿಬಿರದ ಆನೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶಿಬಿರಕ್ಕೆ ಆಗಮಿಸಿದ್ದ ಪ್ರವಾಸಿಗರು ಸಾಕಾನೆಗಳಿಗೆ ತಿನಿಸು ನೀಡಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿಎಫ್‌ಒ ಎ.ಟಿ.ಪೂವಯ್ಯ, ದುಬಾರೆಯಲ್ಲಿ ಆನೆ ದಿನ ಆಚರಿಸಲಾಗುತ್ತಿದ್ದು, ಹೊಸ ಶಿಬಿರ ಹಾರಂಗಿಯಲ್ಲಿ ಇದೇ ಪ್ರಥಮ ಬಾರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ಆನೆ-ಮಾನವ ಸಂಘರ್ಷದ ಕಾರಣ ಹಲವರು ಆನೆಗಳ ಬಗ್ಗೆ ದ್ವೇಷ ಹೊಂದಿರುವುದು ಸಹಜ. ಪರಿಸರ ಸಂರಕ್ಷಣೆಯಂತೆ ಆನೆಗಳ ಸಂರಕ್ಷಣೆ ಕೂಡ ಆಗಬೇಕಿದೆ. ಈ ನಿಟ್ಟಿನಲ್ಲಿ ಆನೆ ದಿನ ಆಚರಿಸಲಾಗುತ್ತಿದೆ. ಇತರ ವನ್ಯಜೀವಿಗಳಂತೆ ಆನೆಗಳು ಕೂಡ ಪರಿಸರದ ಅವಿಭಾಜ್ಯ ಅಂಗ ಎಂದರು.
ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಹಾರಂಗಿ ಶಿಬಿರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಆಗ್ರಹಿಸಿದರು.
ವನ್ಯಜೀವಿ ತಜ್ಞ ಡಾ.ಚಿಟ್ಟಿಯಪ್ಪ ಅವರು ಸೈನಿಕ ಶಾಲಾ ವಿದ್ಯಾರ್ಥಿಗಳಿಗೆ ಆನೆ ದಿನಾಚರಣೆ ಮತ್ತು ಆನೆಗಳ ಬಗ್ಗೆ ಮಾಹಿತಿ
ಒದಗಿಸಿದರು. ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶಿವರಾಂ, ಡಿಆರ್‌ಎಫ್‌ಒಗಳಾದ ಕನ್ನಡ ರಂಜನ್, ಅನಿಲ್ ಡಿಸೋಜ, ವಿಲಾಸ್ ಮತ್ತಿತರರು ಇದ್ದರು.