

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಕೆರೆ ಜಾಗ ಹಾಗೂ ಪಕ್ಕದಲ್ಲಿರುವ ಖಾಸಗಿ ಜಾಗದ ಜಂಟಿ ಸರ್ವೇ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಆನೆಕೆರೆ ಹಾಗೂ ಖಾಸಗಿ ಜಾಗ ಸರ್ವೇ ನಡೆಸಲು ತೀರ್ಮಾನಿಸಲಾಯಿತು. ಹಲವು ವರ್ಷಗಳಿಂದ ಆನೆಕೆರೆ ಒತ್ತುವರಿ ಸಮಸ್ಯೆಗೆ ಪರಿಹಾರ ಕಂಡು ಬಂದಿಲ್ಲ. ಹಲವು ಬಾರಿ ಸರ್ವೇ ನಡೆಸಲಾಗಿದೆ. ಆದರೂ ಕೂಡ ಒತ್ತುವರಿ ತೆರವಾಗಲಿಲ್ಲ. ಆದ್ದರಿಂದ ಈ ಬಾರಿ ಆನೆಕೆರೆ ಹಾಗೂ ಖಾಸಗಿ ವ್ಯಕ್ತಿಗಳ ಜಾಗವನ್ನು ಜಂಟಿ ಸರ್ವೇ ನಡೆಸುವಂತೆ ಫಿಲೋಮಿನಾ ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಆರೋಪಿತ ವ್ಯಕ್ತಿಯ ಜಾಗದ ಜತೆಗೆ, ಕೆರೆ ಪಕ್ಕದಲ್ಲಿರುವ ಎಲ್ಲ ಖಾಸಗಿ ಜಾಗವನ್ನು ಸರ್ವೇ ನಡೆಸುವಂತೆ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು.
ವಾಡಿಕೆಯಂತೆ ಸಭೆಯ ಪ್ರಾರಂಭದಲ್ಲಿ ಜಮಾ ಖರ್ಚಿನ ಬಗ್ಗೆ ಚರ್ಚೆಗಳು ನಡೆದವು. ಬ್ಲೀಚಿಂಗ್ ಪೌಡರ್ ಹಾಗೂ ಫಿನಾಯಿಲ್ ಖರೀದಿಗೆ ಸಂಬಂಧಿಸಿದಂತೆ ಮಾತನಾಡಿದ ಸದಸ್ಯರು, ಬ್ಲೀಚಿಂಗ್ ಪೌಡರ್ ಖರೀದಿಸುತ್ತೀರಾ ಆದರೆ ಈವರೆಗೆ ವಾರ್ಡ್‌ನಲ್ಲಿ ಬ್ಲೀಚಿಂಗ್ ಪೌಡರ್ ಹಾಕಿಲ್ಲ. ಪ್ರತಿ ತಿಂಗಳು ಬಿಲ್ ಮಾತ್ರ ಮಾಡುತ್ತೀರಾ ಎಂದು ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಚರಂಡಿಯಿಂದ ಕಸವನ್ನು ಎತ್ತಿ ರಸ್ತೆಯಲ್ಲಿ ಹಾಕಿ ತೆರಳುತ್ತಾರೆ. ಆದರೆ ಅದನ್ನು ತೆಗೆದುಕೊಂಡು ಹೋಗಲು ವಿಳಂಬ ಮಾಡುತ್ತಿದ್ದಾರೆ. ಕಸ ಮತ್ತೆ ಚರಂಡಿ ಸೇರಿ, ಮಾಡಿದ ಕೆಲಸ ವ್ಯರ್ಥವಾಗುತ್ತಿದೆ. ಆದ್ದರಿಂದ ಆದಷ್ಟು ಬೇಗನೇ ಕಸವನ್ನು ಎತ್ತುವ ಕೆಲಸ ಆಗಬೇಕು ಎಂದು ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು.
ನಂತರ ವರ್ಗ ಒಂದರ ಹಾಗೂ 15ನೇ ಹಣಕಾಸಿನ ಕ್ರಿಯಾಯೋಜನೆಯಲ್ಲಿ ಬಾಕಿಯಿದ್ದ ಕಾಮಗಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಹಾಗೆಯೇ ಅಮೃತ ಗ್ರಾಮ್ ಯೋಜನೆಯ ಕ್ರಿಯಾ ಯೋಜನೆಗೆ ಸಂಬಂಧಿಸಿದ ಬದಲಾವಣೆ ಬಗ್ಗೆ ಪಿಡಿಒ ಸಂತೋಷ್ ಸಭೆಗೆ ತಿಳಿಸಿದರು. ವರ್ಗ ಒಂದರ ಹಾಗೂ 15ನೇ ಹಣಕಾಸಿನ ಹೊಸ ಕ್ರಿಯಾಯೋಜನೆಯನ್ನು ತಯಾರಿಸಲು ಕಾಮಗಾರಿಗಳ ವಿವರವನ್ನು ನೀಡಲು ಪಿಡಿಒ ಸಂತೋಷ್ ಮನವಿ ಮಾಡಿದರು.
ಜಲಜೀವನ್ ಮಿಷನ್ ಯೋಜನೆಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಕೆ.ಬಿ.ಶಂಶುದ್ಧೀನ್, ವಾರ್ಡ್‌ನಲ್ಲಿ ಪೂರ್ಣ ಪ್ರಮಾಣದ ಕೆಲಸಗಳು ಆಗಿಲ್ಲ. ಕೇಂದ್ರ ಸರ್ಕಾರದ ಬಹುಕೋಟಿ ವೆಚ್ಚದ ಕಾಮಗಾರಿ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ಸೂಚಿಸಿದರು. ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆದವು. ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.