ಆನೆಕಾಲು ರೋಗದ ಅರಿವು

HUN-NOV-6-1(ANEKALU ROGA)
ಹುಣಸೂರು ತಾಲೂಕು ಬೋಳನಹಳ್ಳಿಯಲ್ಲಿ ಆಯೋಜಿಸಿದ್ದ ಆನೆಕಾಲು ರೋಗ ಕುರಿತಾದ ಅರಿವು ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಉದ್ಘಾಟಿಸಿರು. ಉಪಾಧ್ಯಕ್ಷೆ ಶೈಲಜಾ, ಡಾ.ದಾಕ್ಷಾಯಿಣಿ, ಎಚ್.ಎಸ್.ಕಾಂತರಾಜು, ರಾಜ್‌ಕುಮಾರ್ ಇತರರಿದ್ದರು.
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಬೋಳನಹಳ್ಳಿ, ಅಸ್ವಾಳು, ಹೊಸರಾಮನಹಳ್ಳಿ ಮುಂತಾದ ಗ್ರಾಮಗಳಲ್ಲಿ ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆನೆಕಾಲು ರೋಗ ಕುರಿತಾದ ಅರಿವು ಮೂಡಿಸುವ ಜತೆಗೆ 620ಕ್ಕೂ ಹೆಚ್ಚು ಜನರ ರಕ್ತದ ಮಾದರಿ ಸಂಗ್ರಹಿಸಲಾಯಿತು.

ಬುಧವಾರ ಬೋಳನಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಬಿ.ದಾಕ್ಷಾಯಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ನಿರ್ದೇಶನದಂತೆ ಜನರಲ್ಲಿ ಆನೆಕಾಲು ರೋಗ ಕುರಿತಾಗಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ರಕ್ತದ ಸ್ಯಾಂಪಲ್‌ಗಳ ಸಂಗ್ರಹಿಸಲಾಗುತ್ತಿದೆ. ಆನೆಕಾಲು ರೋಗ ಒಂದು ಪರಾವಲಂಬಿ ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಕಾಯಿಲೆೆ. ಇದು ಸೋಂಕು ಹೊಂದಿದ ಕ್ಯೂಲೆಕ್ಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ. ಸೊಳ್ಳೆ ಕಚ್ಚಿದ ವಾರದಲ್ಲಿ ಜ್ವರ, ಮೈ-ಕೈನೋವು ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷಿಸಿದರೆ 8-10ವರ್ಷಗಳ ನಂತರ ಮನುಷ್ಯನ ಕಾಲು ಆನೆಯ ಕಾಲಿನಂತೆ ಆಗುತ್ತದೆ. ಸೊಳ್ಳೆ ಉತ್ಪತ್ತಿ ಮತ್ತು ಕಚ್ಚುವಿಕೆ ತಡೆಗಟ್ಟುವುದೇ ರೋಗ ನಿಯಂತ್ರಣಕ್ಕೆ ಮದ್ದು. ಸುತ್ತಮುತ್ತಲ ಪರಿಸರದ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಕಾಯಿಲೆ ನಿಯಂತ್ರಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಬೋಳನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಶೈಲಜಾ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಎಚ್.ಎಸ್.ಕಾಂತರಾಜು, ರಾಜ್‌ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ, ನರ್ಸ್‌ಗಳು, ಪ್ರಯೋಗ ಶಾಲಾ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net