

ಹೂವಿನಹಿಪ್ಪರಗಿ: ಆನೆಕಾಲು ರೋಗವು ಒಂದು ಪರಾವಲಂಬಿ ಸೂಕ್ಷ್ಮಾಣು ಪ್ಯಾರಸೈಟ್ ಜೀವಿಯಿಂದ ಬರುವ ಕಾಯಿಲೆಯಾಗಿದೆ. ಇದು ಸೋಂಕು ಹೊಂದಿದ ಕ್ಯುಲೆಕ್ಸ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ ಎಂದು ಡಾ. ಅಕ್ಷತಾ ಗುಂದಗಿ ಹೇಳಿದರು.
ಸಮೀಪದ ದಿಂಡವಾರ ಗ್ರಾಮದ ಕೆಬಿಎಚ್‌ಪಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏರ್ಪಡಿಸಿದ್ದ ರೋಗ ಪ್ರಸರಣ ಮೌಲ್ಯಮಾಪನ ತಂಡ ಶಾಲೆಯ 1ನೇ ಮತ್ತು 2ನೇ ತರಗತಿ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿ ಅವರು ಮಾತನಾಡಿ, ಈ ಸೊಳ್ಳೆಯು ಸಾಮಾನ್ಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕಚ್ಚುತ್ತದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದರು.
ಗ್ರಾಮಸ್ಥರು ತಮ್ಮ ಮನೆಯ ಸುತ್ತಮುತ್ತ ಚರಂಡಿಗಳು ತಿಪ್ಪೆ ಗುಂಡಿಗಳಲ್ಲಿ ನೀರು ಇಂಗುವಿಕೆ ಮೂಲಕ ಮತ್ತು ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಗ್ರಾಪಂ ಕೆಲಸ. ನಮ್ಮದು ಅಲ್ಲ ಎನ್ನುವ ಭಾವನೆ ಬೇಡ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ನಮ್ಮ ಸುತ್ತಮುತ್ತ ಪರಿಸರ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರತಿಯೊಬ್ಬರು ತಮ್ಮ ಮನೆಗಳ ಅಕ್ಕಪಕ್ಕ ತಿಪ್ಪೆ ಗುಂಡಿಗಳು, ಕೊಳಚೆ ಚರಂಡಿಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಈಗಾಗಲೇ ಈ ಕಾಯಿಲೆ ನಿರ್ಮೂಲನೆ ಹಂತದಲ್ಲಿದೆ. ಪೂರ್ಣ ಹೋಗಲಾಡಿಸಲು ಎಲ್ಲರ ಸಹಕಾರ ಅವಶ್ಯ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನು ಅಸ್ಕಿ, ಎಂ.ಎಸ್. ಬಾಗೇವಾಡಿ, ಪ್ರಯೋಗಾಲಯ ತಂತ್ರಜ್ಞಾಧಿಕಾರಿ ಶ್ರೀಕಾಂತ, ಶಿವಾನಂದ ಕಾಖಂಡಕಿ, ಆನಂದ ಯಂಕಂಚಿ, ಸಮುದಾಯ ಆರೋಗ್ಯಧಿಕಾರಿ ಶರಣು ಗುದ್ದಿ, ತಾಲೂಕಾ ಮಲೇರಿಯಾ ಮೇಲ್ವಿಚಾರಕ ಸಂಜಯ ಸಜ್ಜನ ಇತರರಿದ್ದರು.