

ಕಮಲನಗರ: ದಾಬಕಾ(ಸಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆನೆಕಾಲು ರೋಗ ನಿಯಂತ್ರಣಕ್ಕೆ ಮಾತ್ರೆ ನುಂಗಿದ 14ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದಾರೆ.
ಗ್ರಾಮದ ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಬೆಳಗ್ಗೆ ಶಾಲೆ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಿ ತೆರಳಿದರು. ಕೆಲ ಹೊತ್ತಿನ ಬಳಿಕ ಮಾತ್ರೆ ಸೇವಿಸಿದ ಹಲವರಲ್ಲಿ ವಾಂತಿ ಆದರೆ, ಕೆಲವರು ಸಂಕಟದಿಂದ ಉರುಳಾಡಿದರು. ಮಂಗಳವಾರ ಮತ್ತೆ ಶಾಲೆಗೆ ತೆರಳಿದ ಮಕ್ಕಳಲ್ಲಿ ಹೊಟ್ಟೆ ನೋವು, ತಲೆ ಸುತ್ತು ಕಾಣಿಸಿಕೊಂಡಿದೆ. ವಿಷಯ ತಿಳಿದ ಪಾಲಕರು ಶಾಲೆಗೆ ತೆರಳಿ ಶಿಕ್ಷಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಶಿಕ್ಷಕ, ಆರೋಗ್ಯ ಇಲಾಖೆ ಮತ್ತು ಪಾಲಕರ ಮಧ್ಯೆ ಗಲಾಟೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೊಕ್ರಾಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ಕೊರತೆಯಿಂದ ಕೆಲ ಮಕ್ಕಳು ಅಸ್ವಸ್ಥಗೊಂಡಿದ್ದು ಗಮನಕ್ಕೆ ಬಂದಿದ್ದು, ಚಿಕಿತ್ಸೆ ನಂತರ ಎಲ್ಲ ಮಕ್ಕಳು ಗುಣ ಹೊಂದಿದ್ದಾರೆ. ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ವಿಜಯಕುಮಾರ ತಿಳಿಸಿದ್ದಾರೆ.