

ನಂಜನಗೂಡು: ತಾಲೂಕಿನ ದೊಡ್ಡಕವಲಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗಟ್ಟವಾಡಿ ಗ್ರಾಮದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆನೆಕಾಲು ರೋಗ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಟ್ಟವಾಡಿ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿದ ವೈದ್ಯರ ತಂಡ ಆನೆಕಾಲು ರೋಗದ ಬಗ್ಗೆ ಜಾಗೃತಿ ಮೂಡಿಸಿ ಸುಮಾರು 357 ಜನರಿಂದ ರಕ್ತ ಲೇಪನ ಸಂಗ್ರಹಿಸಲಾಯಿತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಕೀಟ ಶಾಸ್ತ್ರಜ್ಞೆ ರತ್ನಾಕುಮಾರಿ ಮಾತನಾಡಿ, ಕಲುಷಿತ ನೀರಿನಲ್ಲಿ ಬೆಳೆಯುವ ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಆನೆ ಕಾಲು ರೋಗ ಬರುತ್ತದೆ. ನಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕನಿಷ್ಠ 2 ವರ್ಷದಿಂದ 10 ವರ್ಷದೊಳಗಿನ ಯಾವುದೇ ಅವಧಿಯಲ್ಲಿ ರೋಗ ಕಾಣಿಸಿಕೊಳ್ಳಬಹುದಾಗಿದೆ ಎಂದರು.
ಕಾಲುಗಳು ದಪ್ಪಾಗುವುದು, ಗಂಡಸರಲ್ಲಿ ವೃಷಣಗಳ ಊತ, ಕೈಗಳು ದಪ್ಪಾಗುವುದು ಮತ್ತು ಮಹಿಳೆಯರಲ್ಲಿ ಸ್ತನಗಳು ಬೃಹದಾಕಾರವಾಗಿ ಕಂಡು ಬರುತ್ತವೆ. ಇದರೊಂದಿಗೆ ಜ್ವರ ಬರುವುದು, ವಾಂತಿಯಾಗುವುದು, ತಲೆ ನೋವು ಕೂಡ ರೋಗದ ಲಕ್ಷಣ. ಈ ರೋಗ ಬಾಧಿತರಲ್ಲಿ ನರಳಿಕೆ ಹೆಚ್ಚಾಗಿರುತ್ತದೆ. ಕ್ಯೂಲೆಕ್ಸ್ ಸೊಳ್ಳೆ ಮನುಷ್ಯನನ್ನು ಕಚ್ಚಿದಾಗ ಮೈಕ್ರೋಫೈಲೇರಿಯಾ ಜಂತು ದೇಹ ಸೇರಿ ರೋಗ ಹರಡುತ್ತದೆ. ಆದ್ದರಿಂದ ಗ್ರಾಮಸ್ಥರು ಮುಂಜಾಗ್ರತಾ ಕ್ರಮ ಅನುಸರಿಸಿ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಸ್.ಸಂಪತ್ ಕುಮಾರ್ ಮಾತನಾಡಿ, ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನ ಬಯಲು ಶೌಚಕ್ಕೆ ಹೋಗಿ ಅಪಾಯ ತಂದುಕೊಳ್ಳುತ್ತಿದ್ದಾರೆ. ಹಾಗಾಗಿ ಮನೆಯಲ್ಲಿರುವ ಶೌಚಗೃಹವನ್ನು ಬಳಸಬೇಕು. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ವಾರಕ್ಕೊಮ್ಮೆ ಡ್ರಮ್ ಹಾಗೂ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಬೇಕು. ಹೂವಿನ ಕುಂಡ ಟೈರ್‌ಗಳು ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ನವೀನ್, ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ಮೇಲ್ವಿಚಾರಕ ಕರುಣಾ ಮೂರ್ತಿ, ಸಮುದಾಯ ಆರೋಗ್ಯಾಧಿಕಾರಿ ಡಾ.ಶಿವಕುಮಾರ್, ಪ್ರಯೋಗಾಲಯ ತಂತ್ರಜ್ಞೆ ಸುಜಾತಾ ಇತರರಿದ್ದರು.