ಆನೆ ಸಂಘರ್ಷ ತಪ್ಪಿಸಲು ಕ್ಷಿಪ್ರ ಕಾರ್ಯಪಡೆ, 3 ರಾಜ್ಯದ ಅರಣ್ಯಾಧಿಕಾರಿಗಳ ಜಂಟಿ ಸಭೆ ಶೀಘ್ರ

3-klr-4
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಏಳೆಂಟು ವರ್ಷಗಳಲ್ಲಿ ಆನೆಗಳ ದಾಳಿಯಿಂದ ಹತ್ತಕ್ಕೂ ಹೆಚ್ಚು ಜನ ಬಲಿಯಾದ ಮೇಲೆ ರಾಜ್ಯ ಸರ್ಕಾರಕ್ಕೆ ಜ್ಞಾನೋದಯವಾಗಿದ್ದು, ನೆರೆಯ ಆಂಧ್ರ ಮತ್ತು ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ.'

ಗಡಿಭಾಗದ ಕೆಜಿಎಫ್, ಬಂಗಾರಪೇಟೆ ಹಾಗೂ ಮಾಲೂರಿನಲ್ಲಿ ಏಳೆಂಟು ವರ್ಷಗಳಿಂದ ಆನೆಗಳು ಆಂಧ್ರದ ಚಿತ್ತೂರು ಮತ್ತು ತಮಿಳುನಾಡಿನ ಕೃಷ್ಣಗಿರಿ ಆರಣ್ಯದಿಂದ ಆಹಾರ, ನೀರು ಆರಸಿ ಹಾಗೂ ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತಿರುವುದರಿಂದ ಮಾನವನ ಜತೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ರಾತ್ರಿ ವೇಳೆ ಆಹಾರ ಸಿಗುವ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಜನರಿಗೆ ಎಚ್ಚರಿಕೆ ನೀಡುವ ಜತೆಗೆ ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಕ್ಷಿಪ್ರ ಕಾರ್ಯ ಪಡೆ: ಆನೆಗಳನ್ನು ನಿಯಂತ್ರಿಸಲು ಕ್ಷಿಪ್ರ ಕಾರ್ಯಪಡೆ ರಚಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಒಟ್ಟು 5 ತಂಡ ರಚಿಸಿ ಒಂದು ತಂಡಕ್ಕೆ 8 ನುರಿತ ಸಿಬ್ಬಂದಿ ನಿಯೋಜಿಸಲು ಮುಂದಾಗಿದೆ.

ರೈಲ್ವೆ ಕಂಬಿ ತಡೆಗೋಡೆ: ಆನೆಗಳ ನುಸುಳುವಿಕೆ ತಪ್ಪಿಸಲು ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರೈಲ್ವೆ ಕಂಬಿ ಒದಗಿಸುವುದು ಸುಲಭದ ಮಾತಲ್ಲ. 1 ಕಿ.ಮೀ. ರೈಲ್ವೆ ಕಂಬಿಗೆ 1.20 ಕೋಟಿ ರೂ. ಬೇಕಾಗಿದ್ದು 70 ರಿಂದ 80 ಕಿ.ಮೀ.ಗೆ ರೈಲ್ವೆ ಕಂಬಿಗಳಿಗಾಗಿ ದೊಡ್ಡ ಮೊತ್ತವನ್ನು ಸರ್ಕಾರ ಹೇಗೆ ಒದಗಿಸುತ್ತದೆ ಎಂಬುದು ಪ್ರಶ್ನೆ.

ತಜ್ಞರ ಸಲಹೆಯಂತೆ ಕ್ರಿಯಾ ಯೋಜನೆ: ಜಿಲ್ಲೆಯ ಗಡಿಯಲ್ಲಿ ಆನೆ ನಿಯಂತ್ರಣಕ್ಕೆ ತಜ್ಞರೊಂದಿಗೆ ಸಮಾಲೋಚಿಸಿ ಅಧ್ಯಯನ ವರದಿ ಆಧರಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಅರಣ್ಯ ಇಲಾಖೆ ಮುಂದಾಗಿದ್ದು, ಕಾಡಾನೆಗಳ ತಜ್ಞರಾದ ಸುಕುಮಾರ್, ಜಾನ್ಸನ್ ಇನ್ನಿತರರ ಸಭೆ ನಡೆಸಲು ಅರಣ್ಯ ಸಚಿವರು ಸೂಚಿಸಿದ್ದಾರೆ. ಕೋಲಾರ ಅಥವಾ ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯುವ ಸಾಧ್ಯತೆಗಳಿವೆ.

41 ಲಕ್ಷ ಬೆಳೆ ಪರಿಹಾರ: ಬೆಳೆ ಹಾನಿಗೆ ಈ ವರ್ಷ 41 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನೂ 18 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಗಿ, ಭತ್ತ, ಬಾಳೆ, ಹೂಕೋಸು ಇನ್ನಿತರ ತರಕಾರಿ ಬೆಳೆಗಳ ಜತೆಗೆ ಈ ವರ್ಷದಿಂದ ಹಿಪ್ಪು ನೇರಳೆಯನ್ನೂ ನಷ್ಟ ಪರಿಹಾರ ಪಟ್ಟಿಗೆ ಸೇರಿಸಲಾಗಿದೆ. ನಷ್ಟ ಪರಿಹಾರ ಮೊತ್ತ ಹೆಚ್ಚಳದ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ.

ಬೆಳೆ ಹಾನಿಗೆ ಇ-ಪರಿಹಾರ: ಬೆಳೆ ಹಾನಿಗೆ ಪರಿಹಾರ ನೀಡಲು ಸರ್ಕಾರ ಇ-ಪರಿಹಾರ ಆ್ಯಪ್ ಆವಿಷ್ಕಾರ ಮಾಡಿದ್ದು, ಹೊಸ ಪದ್ಧತಿ ಈ ತಿಂಗಳಿಂದಲೇ ಚಾಲನೆಗೆ ಬರುವುದರಿಂದ ರೈತರು ಪರಿಹಾರಕ್ಕಾಗಿ ಅಲೆದಾಡುವುದು ತಪ್ಪಲಿದೆ. ಜತೆಗೆ ಆನೆಗಳ ತಾಣ ಪತ್ತೆ, ಸಿಬ್ಬಂದಿ ನಿಯೋಜನೆ ಹಾಗೂ ಜನರಿಗೆ ಎಚ್ಚರ ನೀಡುವ ಸಲುವಾಗಿ ಪ್ರತ್ಯೇಕ ವಾಹನ ಖರೀದಿಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ವನ್ಯ ಜೀವಿಧಾಮಕ್ಕೆ ಹಣವಿಲ್ಲ: ಜಿಲ್ಲೆಯ ಕಾಮಸಮುದ್ರ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮವೆಂದು ಸರ್ಕಾರ 2019ರಲ್ಲಿ ಘೋಷಿಸಿದ್ದರೂ ಈವರೆಗೆ ನಯಾಪೈಸೆ ನೀಡಿಲ್ಲ. ಈ ಸಾಲಿನಲ್ಲಿ ಅನುದಾನ ಸಿಗುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 7800 ಎಕರೆ ವನ್ಯಜೀವಿಧಾಮಕ್ಕೆ ಗುರುತಿಸಲ್ಪಟ್ಟ ಪ್ರದೇಶವಿದ್ದು, ಅಭಿವೃದ್ಧಿಗೆ ಯರಗೋಳ್ ಯೋಜನೆಯಡಿ ನೀಡಿರುವ 2 ಕೋಟಿ ರೂ.ಗಳಲ್ಲಿ ಆನೆಗಳಿಗೆ ನೀರಿನ ವ್ಯವಸ್ಥೆ, ಅರಣ್ಯ ಸಿಬ್ಬಂದಿ ಓಡಾಡಲು ರಸ್ತೆ, ಶಿಬಿರಗಳ ನಿರ್ಮಾಣದಂತಹ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಒಂದು ವರ್ಷದಲ್ಲಿ ಆನೆ ದಾಳಿಗೆ ಜಿಲ್ಲೆಯಲ್ಲಿ ನಾಲ್ವರು ಸತ್ತಿದ್ದು, ಇದೀಗ ಪರಿಹಾರ ಮೊತ್ತವನ್ನು 7.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಯಿಂದ ಮೃತಪಟ್ಟರೆ 20 ಲಕ್ಷ ರೂ. ನೀಡಲು ಸರ್ಕಾರ ಚಿಂತಿಸಿದೆ. ಮೂರು ರಾಜ್ಯಗಳ ಅರಣ್ಯಾಧಿಕಾರಿಗಳ ಜಂಟಿ ಸಭೆ 15 ದಿನದೊಳಗೆ ನಡೆಯುವ ಸಾಧ್ಯತೆ ಇದೆ. ಗ್ರಾಮೀಣರು ರಾತ್ರಿ ವೇಳೆ ಕಾಡು ಮತ್ತು ಹೊಲಗಳ ಬಳಿ ಹೋಗುವಾಗ ಎಚ್ಚರವಹಿಸಬೇಕು. ವೈ.ಚಕ್ರಪಾಣಿ, ಡಿಎಫ್‌ಒ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net