ಆನೆ ಮರಿ ಚಿಕಿತ್ಸೆಗೆ ರಾಹುಲ್ ಮನವಿ

45d99ae9-a3a8-44aa-9ff1-5f31b1eebe7e
Published on

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡಿರುವ ಆನೆ ಮರಿಯೊಂದಕ್ಕೆ ತಕ್ಷಣ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.


ಭಾರತ ಐಕ್ಯತಾ ಯಾತ್ರೆಗೆ ಎರಡು ದಿನ ವಿರಾಮ ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾಗರಹೊಳೆಯಲ್ಲಿ ಮಂಗಳವಾರ ಸಫಾರಿಗೆ ತೆರಳಿದ್ದರು. ಆಗ, ತಾಯಿಯ ಜತೆಗಿದ್ದ ಆನೆಯ ಮರಿಯೊಂದು ತೀವ್ರವಾಗಿ ಗಾಯಗೊಂಡಿರುವುದನ್ನು ನೋಡಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಬುಧವಾರ ಪತ್ರ ಬರೆದು ಮಾಹಿತಿ ನೀಡಿದ್ದಾರೆ.


ತಾಯಿಯ ಜತೆಗಿದ್ದ ಚಿಕ್ಕ ಆನೆ ಮರಿಯ ಬಾಲ ಮತ್ತು ಸೊಂಡಿಲಿಗೆ ಗಾಯಗಳಾಗಿವೆ. ಅದು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗ ಸಹಜವಾಗಿಯೇ ಪ್ರಕ್ರಿಯೆಗಳು ನಡೆಯಬೇಕು ಎಂಬ ಅಭಿಪ್ರಾಯ ಇದೆ. ಅಳಿವಿನಂಚಿನಲ್ಲಿರುವ ಪ್ರಭೇದದ ಜೀವಿಗಳು ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂತಹ ಅಭಿಪ್ರಾಯದ ಹೊರತಾಗಿಯೂ ಯೋಚಿಸಬೇಕಾಗುತ್ತದೆ. ಅಂತೆಯೆ, ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ಕೋರಿಕೊಂಡಿರುವೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿ ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ ಎಂದು ರಾಹುಲ್ ಪತ್ರದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net