

ಆನೆ ಮರಳಿಸಲು ವನತಾರ ಒಪ್ಪಿಗೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಕೊಲ್ಲಾಪುರದ ನಾಂದಣಿ ಜೈನ್ ಮಠದಿಂದ ವನತಾರ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಗೊಂಡ ಆನೆ ಮಹಾದೇವಿ ಮರುಳಿಸಬೇಕು ಎನ್ನುವ ಭಕ್ತರ ಆಗ್ರಹಕ್ಕೆ ಅಂಬಾನಿ ಒಡೆತನದ ವನತಾರ ಸಂಸ್ಥೆ ತಲೆ ಬಾಗಿ ಆನೆ ಮರಳಿಸುವ ನಿರ್ಧಾರ ಪ್ರಕಟಿಸಿದೆ.
ನಾಂದಣಿ ಮಠದ ಆನೆ ಮಹಾದೇವಿಯನ್ನು ಮರಳಿಸುವಂತೆ ವನತಾರ ಸಂಸ್ಥೆಯ ಮಾಲೀಕ ಅನಿಲ ಅಂಬಾನಿಯ ಸಂಸ್ಥೆಯ ವಿರುದ್ದ ಭಕ್ತರ ಆಕ್ರೋಶ ತೀವ್ರಗೊಂಡ ಹಿನ್ನಲೆ, ಸಂಸ್ಥೆಯ ಸಿಇಒ ವಿಹಾನ್ ಕುಲಕರ್ಣಿ ನಾಂದಣಿ ಮಠಕ್ಕೆ ಭೇಟಿ ನೀಡಿ, ಮಠದ ಭಟ್ಟಾರಕ ಪಟ್ಟಾಚಾರ್ಯ ಜಿನಸೇನ ಸ್ವಾಮಿಜಿ ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚೆಸಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರ,ಮಠ ಹಾಗೂ ವನತಾರ ಸಂಸ್ಥೆ ಜಂಟಿಯಾಗಿ ಆನೆಯನ್ನು ಮರಳಿ ಮಠಕ್ಕೆ ನೀಡುವಂತೆ ಅರ್ಜಿ ಸಲ್ಲಿಸಲು ನಿರ್ಧಾರಕ್ಕೆ ಬಂದಿವೆ.
ಆನೆಯನ್ನು ಸ್ಥಳಾಂತರಿಸಲು ನ್ಯಾಯಾಲಯ ಒಪ್ಪಿದರೆ ಆನೆಯನ್ನು ಮಠದಲ್ಲಿ ಇರಿಸಿಕೊಂಡು ವನತಾರ ಸಂಸ್ಥೆಯಿಂದಲೇ ಎಲ್ಲಾ ರೀ ತಿಯ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಸಿದ್ದವಿದೆ ಎಂದು ಸಂಸ್ಥೆಯ ಸಿಇಒ ತಿಳಿಸಿದ್ದಾರೆ.
ರಾಜ್ಯದ ಮೂರು ಆನೆಗಳ ವಿಚಾರಣೆ ಸೆ.3 ಕ್ಕೆ !
ರಾಜ್ಯದ ಮೂರು ಮಠಗಳಲ್ಲಿ ಸಾಕಿರುವ ಪದ್ಮ, ಧ್ರುವ ಮತ್ತು ಮೇನಕ ಎಂಬ ಆನೆಗಳನ್ನು ಮಠದಿಂದ ಸ್ಥಳಾಂತರಿಸುವ ಕುರಿತು ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಲಾಗಿದೆ.
ಜಿಲ್ಲೆಯ ಶೆಡಬಾಳದ ಶಾಂತಿಸಾಗರ ದಿಗಂಬರ ಜೈನ್ ಆಶ್ರಮದ ಪದ್ಮ, ರಾಯಬಾಗ ತಾಲೂಕಿನ ಆಲಖನೂರ ಕರಿಸಿದ್ದೇಶ್ವರ ಮಠದಧ್ರುವ ಮತ್ತು ರಾಯಚೂರಿನ ಗುರು ಮಹಾಂತೇಶ್ವರ ದೇವಾಲಯದ ಮೇನಕ ಆನೆಗಳನ್ನು ಬಿಡುಗಡೆಗೊಳಿಸಿ ಸ್ಥಳಾಂತರಿಸುವಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಈಚೆಗೆ (ಆ.5) ರಂದು ನಡೆಸಿ, ಸೆ.3 ಕ್ಕೆ ವಿಚಾರಣೆ ಮುಂದೂಡಿದೆ ಎಂದು ಶೆಡಬಾಳದ ಶಾಂತಿಸಾಗರ ದಿಗಂಬರ ಜೈನ್ ಆಶ್ರಮದ ಟ್ರಸ್ಟಿ ರಾಜು ನಾಂದ್ರೆ ತಿಳಿಸಿದ್ದಾರೆ.