ಆನೆ ದಾಳಿಗೆ ನಿಲ್ಲದ ಮಾನವ ಬಲಿ

30Rajesh2
Published on

ಚಾಮರಾಜನಗರ: ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ಪ್ರಾಣಿ ಸಂಘರ್ಷದಲ್ಲಿ ಪ್ರಾಣಿಗಳು ಮಾತ್ರ ಸಾಯುತ್ತಿಲ್ಲ. ಮನುಷ್ಯರ ಜೀವಗಳೂ ಬಲಿಯಾಗುತ್ತಿವೆ. ಅದರಲ್ಲೂ ಆನೆಗಳ ದಾಳಿಗೆ ಜೀವ ಹಾನಿಗಳು ಮುಂದುವರೆಯುತ್ತಲೇ ಇವೆ.

ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳಲ್ಲಿ ಅಪಾರ ವನ್ಯಜೀವಿಗಳು ಜೀವಿಸುತ್ತಿವೆ.

ಕರ್ನಾಟಕ ಅರಣ್ಯ ಇಲಾಖೆಯ ಮಧ್ಯಂತರ ಆನೆ ಗಣತಿ ವರದಿ(2023) ಪ್ರಕಾರ, ಚಾಮರಾಜನಗರ ವೃತ್ತವು 1561 ಆನೆಗಳನ್ನು ಹೊಂದಿವೆ. ಈ ಮೂಲಕ ಚಾಮರಾಜನಗರ ಕರ್ನಾಟಕದ ಎಲ್ಲ ವಲಯಗಳಿಗಿಂತ ಹೆಚ್ಚು ಆನೆಗಳಿರುವ ಜಿಲ್ಲೆಯಾಗಿದೆ. ಹೀಗಾಗಿ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಮಾನವ-ಆನೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಮಾನವ ಪ್ರಾಣ ಹಾನಿಯೂ ಉಂಟಾಗಿದೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ, 2023ರಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮೊಳಿಯೂರು ವಲಯದಲ್ಲಿ ರವಿಕುಮಾರ್, ಚಿಕ್ಕೆಗೌಡ, ಬಾಲಾಜಿನಾಯ್ಕ, ಎ.ಎಂ.ಗುಡಿಯಲ್ಲಿ ಹೊರಗುತ್ತಿಗೆ ನೌಕರ ಡಿ.ಬೊಮ್ಮ, ಹೆಡಿಯಾಲದಲ್ಲಿ ಮಹೇಂದ್ರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯ ಪುಣಜನೂರು ವಲಯದಲ್ಲಿ ನಾಗೇಶ್, ಹರ್ಷ, ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ರಾಮಾಪುರ ವಲಯದಲ್ಲಿ ಪುಟ್ಟಸ್ವಾಮಿ, ಪ್ರಭುಸ್ವಾಮಿ, ಚಿಕ್ಕಮಾದಯ್ಯ, ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಮುಗ್ಗೂರು ವಲಯದಲ್ಲಿ ಮರಿಗೌಡ ಮೃತಪಟ್ಟಿದ್ದರು.

2024ರಲ್ಲಿ ಬಂಡೀಪುರದ ಎನ್.ಬೇಗೂರು ವಲಯದಲ್ಲಿ ಚಿಕ್ಕಮ್ಮ, ಗುಂಡ್ರೆ ವಲಯದಲ್ಲಿ ಶಶಾಂಕ್, ಅವಿನಾಶ್ ಆನೆ ದಾಳಿಗೆ ಒಳಗಾಗಿ ಮೃತಪಟ್ಟರು. ಬಿಆರ್‌ಟಿ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಸಣ್ಣಮಾದ, ಬೈಲೂರು ವಲಯದಲ್ಲಿ ಮಾದ, ಈರ, ಕೆ.ಗುಡಿ ವಲಯದಲ್ಲಿ ಜಡೇಗೌಡ ಆನೆ ದಾಳಿಯಿಂದ ಮೃತಪಟ್ಟರು. ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಪಿ.ಜಿ.ಪಾಳ್ಯ ವಲಯದಲ್ಲಿ ಮುನಿಯಪ್ಪ ಆನೆ ದಾಳಿಗೆ ಬಲಿಯಾದರು. ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಮುಗ್ಗೂರಿನಲ್ಲಿ ರಾಜು, ಸಂಗಮ ವಲಯದಲ್ಲಿ ಕರಿಯಪ್ಪ ಆನೆ ದಾಳಿಗೆ ಸತ್ತು ಹೋದರು.

ಅರಣ್ಯ ಇಲಾಖೆಯಿಂದ ಮೃತರ ಕುಟುಂಬಗಳಿಗೆ ದಯಾತ್ಮಕ ಪರಿಹಾರ ಕೊಟ್ಟಿದೆಯಾದರೂ ಕಳೆದುಹೋದ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ. ಸತ್ತವರ ಮನೆಯ ದುಃಖಕ್ಕೆ ಬೆಲೆ ಕಟ್ಟಲಾಗುವುದಿಲ್ಲ.

ಕಾಡಂಚಿನ ರೈತರ ಜೀವಕ್ಕೆ ಆಪತ್ತು:

ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಗಡಿಜಿಲ್ಲೆ ಚಾಮರಾಜನಗರ ಮಾನವ-ಪ್ರಾಣಿ ಸಂಘರ್ಷದ ನೆಲೆಯಾಗಿದೆ. ಪರಿಸರದ ಮೇಲೆ ಮನುಷ್ಯನ ಹಸ್ತಕ್ಷೇಪ, ಕಳ್ಳಬೇಟೆಯಿಂದ ಪ್ರಾಣಿಗಳು ಸಾಯುತ್ತಿವೆ. ದುರಾಸೆಯ ಪ್ರತಿಲವಾಗಿ ಪ್ರಾಕೃತಿಕ ಸಂಪತ್ತಿಗೆ ವಿಪತ್ತು ಒದಗಿಬರುತ್ತಿದೆ. ಒಂದು ಕಾಲದಲ್ಲಿ ಮೋಜು ಮಸ್ತಿಗೆ ಶುರುವಾದ ಬೇಟೆಗಾರಿಕೆ ನಂತರದ ದಿನಗಳಲ್ಲಿ ಪ್ರಾಣಿಗಳ ಅಳಿವು ಉಳಿವಿನ ಅಂಚಿಗೆ ತಂದು ನಿಲ್ಲಿಸಿತು. ಸರ್ಕಾರ ಪ್ರಾಣಿಗಳ ಬೇಟೆಗೆ ತಡೆಯೊಡ್ಡಿ ಕಾನೂನಿನ ರಕ್ಷೆ ಒದಗಿಸಿತು. ಆದರೂ ಕಳ್ಳಬೇಟೆಯಿಂದ ವನ್ಯಜೀವಿಗಳ ಸಾವು ಸಂಭವಿಸುತ್ತಲೇ ಇವೆ.

ಅಂತೆಯೇ ವನ್ಯಜೀವಿಗಳ ಉಪಟಳದಿಂದ ಮನುಷ್ಯರ ಉಸಿರಿಗೂ ಕುತ್ತು ಬರುತ್ತಿದೆ. ಕಾಡಂಚಿನ ಗ್ರಾಮಗಳ ಜಮೀನಿನ ರೈತರ ಜೀವಗಳಿಗೆ ಗ್ಯಾರಂಟಿಯೇ ಇಲ್ಲ. ಕಾಡಿನಿಂದ ನಾಡಿಗೆ ಬರುವ ವನ್ಯಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಬೆಳೆ, ಆಸ್ತಿ ಮತ್ತು ಪ್ರಾಣ ಹಾನಿ ಸಂಭವಿಸುತ್ತಿರುವುದು ನಿರಂತರವಾಗಿ ಬಿಟ್ಟಿದೆ. ಅರಣ್ಯ ಇಲಾಖೆಯಿಂದ ಕಂದಕ, ಸೋಲಾರ್ ತಂತಿ, ಬೇಲಿ, ತೂಗುಬೇಲಿ, ರೈಲ್ವೆ ಬ್ಯಾರಿಗೇಟ್ ಅಳಡಿಸಲಾಗಿದ್ದರೂ ಕೆಲವು ಕಡೆ ಹಾವಳಿ ನಿಲ್ಲುತ್ತಿಲ್ಲ.

ಸಾಮಾನ್ಯ ಸ್ಥಳಗಳಲ್ಲಿ ಮಾಡುವ ಕೃಷಿಗೇ ನೂರಾರು ಸವಾಲುಗಳಿವೆ. ಇದರ ನಡುವೆ ಕಾಡಂಚಿನಂತಹ ವಿಶೇಷ ಪ್ರದೇಶದಲ್ಲಿ ಕೃಷಿ ಮಾಡುವುದಕ್ಕೆ ಸಾವಿರಾರು ಸವಾಲುಗಳಿವೆ. ಇದರಲ್ಲಿ ಕಾಡಂಚಿನ ಗ್ರಾಮಗಳಲ್ಲಿರುವ ರೈತರು ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿ ಬಿಟ್ಟಿದೆ. ರಾತ್ರಿ ಪೂರ್ತಿ ಬೆಳೆ ಕಾಯಲು ಜಮೀನಿನಲ್ಲೇ ಉಳಿಯುವ ರೈತ ಕಾಡುಪ್ರಾಣಿಗಳಿಂದ ಜೀವ ಉಳಿಸಿಕೊಂಡು ಬೆಳಗ್ಗೆ ಮನೆಗೆ ವಾಪಸ್ ಆಗುತ್ತಿರುವುದು ಅದೃಷ್ಟವೇ ಸರಿ. ಕೆಲವೊಮ್ಮೆ ಅದೃಷ್ಟ ಕೆಟ್ಟರೆ ಹನೂರು ತಾಲೂಕಿನ ಕೊರಮಕತ್ತರಿಯಲ್ಲಿ ಅರಿಶಿಣ ಬೆಳೆ ಕಾಯಲು ಹೋಗಿ ಆನೆ ದಾಳಿಗೆ ಬಲಿಯಾದ ನಂಜಪ್ಪ(60) ಸ್ಥಿತಿಯಾಗುತ್ತದೆ.

ಸೋಲಿಗರ ಸಾವು: 2023 ಮತ್ತು 2024ರಲ್ಲಿ ಆನೆ ದಾಳಿಗೆ ಬಲಿಯಾದವರಲ್ಲಿ ವನವಾಸಿಗಳಾಗಿರುವ ಸೋಲಿಗರ ಸಂಖ್ಯೆ ಅಧಿಕವಿದೆ. ಕಾಡಿನಲ್ಲಿ ಹೋಗುವಾಗ ಆನೆಗಳು ದಾಳಿ ಮಾಡುವುದರಿಂದ ಸಾವುಗಳು ಸಂಭವಿಸುತ್ತಿವೆ. ಕಾಡುಪ್ರಾಣಿಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವ ಸೋಲಿಗರು ವನ್ಯಜೀವಿಗಳ ದಾಳಿಯ ಸೂಚನೆಯನ್ನು ಮೊದಲೇ ಅರಿಯುವಷ್ಟು ನಿಪುಣರು. ಆದರೂ ಕೆಲವೊಮ್ಮೆ ಆನೆ ಏಕಾಏಕಿ ದಾಳಿ ಮಾಡುವುದರಿಂದ ಜೀವ ಹಾನಿಗಳು ಸಂಭವಿಸುತ್ತಲೇ ಇವೆ.

ಮಾನವ-ಆನೆ ಸಂಘರ್ಷ ತಡೆಗೆ 157 ಕೋಟಿ ರೂ. ಮಲೆ ಮಹದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾನವ-ಆನೆ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರೂ. ಹೆಚ್ಚುವರಿಯಾಗಿ ನೀಡಲು ಅನುಮೋದನೆ ದೊರೆತಿದೆ. 88 ಕಿ.ಮೀ. ರೈಲ್ವೆ ಬ್ಯಾರಿಕೇಡ್, 53 ಕಿ.ಮೀ. ಆನೆ ಕಂದಕ, 50 ಕಿ.ಮೀ. ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್) ನಿರ್ಮಾಣಕ್ಕೆ ಈ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ ಎಂದು ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯಲ್ಲಿ ಮಾವನ-ಆನೆ ಸಂಘರ್ಷ ತಡೆಯಲು ಅನುದಾನ ಮಂಜೂರಾಗಿದೆ. ಈಗಾಗಲೇ ಕಂದಕ, ರೈಲ್ವೆ ಬ್ಯಾರಿಗೇಟ್, ಸೋಲಾರ್ ತಂತಿ, ತಂತಿ ಬೇಲಿ, ತೂಗುಬೇಲಿಗಳನ್ನು ಅಳವಡಿಸಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾನವ-ಆನೆ ಸಂಘರ್ಷ ಕಡಿಮೆಯಾಗುತ್ತಿದೆ. ಮುಂದಿನ ಮೂರು ವರ್ಷಗಳೊಳಗೆ ಸಂಪೂರ್ಣ ತಗ್ಗಿಸಲು ಮತ್ತಷ್ಟು ಕ್ರಮ ಕೈಗೊಳ್ಳುತ್ತೇವೆ. ಹೀರಾಲಾಲ್, ಸಿಸಿಎ್, ಚಾಮರಾಜನಗರ ವೃತ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net