

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಆನೆ ದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿಐಡಿ ವಿಶೇಷ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಕೊಲ್ಹಾಪುರದ ಸಾತ್ ಜಮಾದಾರ, ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ ಬಂಧಿತರು. ಬಂಧಿತರಂದ ಆನೆ ದಂತದಿಂದ ತಯಾರಿಸಿದ್ದ 4 ಕೋಟಿ ರೂ.ಗೂ ಹೆಚ್ಚು ಮೌಲ್ಯದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 ಗ್ರಾಂ ತೂಕದ ಕೈಗಡಗ, 350 ಗ್ರಾಂ ಆಯತಾಕಾರದ ಪೆಟ್ಟಿಗೆ, 279 ಗ್ರಾಂ ಮೊಟ್ಟೆ ಆಕಾರದ ಪೆಟ್ಟಿಗೆ ವಶ ಪಡಿಸಿಕೊಳ್ಳಲಾಗಿದೆ.
ಸಿಐಡಿ ಅರಣ್ಯ ಸಂಚಾರ ದಳದ ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಸಬ್ ಇನ್ಸ್ಪೆಕ್ಟರ್ ಪ್ರಸಾದ ಪಣೇಕರ, ಎಂ.ಎ. ಪಾಠಕ್, ಅಶೋಕ ನಾಗರಳ್ಳಿ, ರವೀಂದ್ರ ಗೋನೇನವರ, ಎಸ್.ಎಚ್. ಹುಲಗೇರ, ದಿವ್ಯಾ ನಾಯಕ ತಂಡ, ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿ ಬಂಧಿಸಿದೆ. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ರಾಜಸ್ತಾನದ ಒಂದು ಸಂತೆಯಲ್ಲಿ ಸಾಧು-ಸಂತರ ಬಳಿ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.