

ಹಾಸನ: ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ಎಲಿಫಂಟ್ ಟಾಸ್ಕ್ ಫೋರ್ಸ್ ಇನ್ನು ಮೂರು ವಾರಗಳಲ್ಲಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಮತ್ತು ಆನೆ-ಮಾನವ ಸಂಘರ್ಷ ಹೆಚ್ಚಿರುವುದರಿಂದ ಈ ನಾಲ್ಕು ಜಿಲ್ಲೆಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಎಲಿಫಂಟ್ ಟಾಸ್ಕ್ ಫೋರ್ಷ್ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಈ ವಿಶೇಷ ಕಾರ್ಯಪಡೆಯಲ್ಲಿ ಒಬ್ಬ ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿಗಳು, 8 ಜನ ಅರಣ್ಯ ರಕ್ಷಕರು ಮತ್ತು 32 ಮಂದಿ ಹೊರಗುತ್ತಿಗೆ ಸಿಬ್ಬಂದಿ ಇರುತ್ತಾರೆ. ಹೊರಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಆನೆ ವಿಶೇಷ ಕಾರ್ಯಪಡೆಗೆ ಸಕಲೇಶಪುರ ಕೇಂದ್ರ ಸ್ಥಾನವಾಗಿರುತ್ತದೆ. ಯಸಳೂರು, ಬೇಲೂರು ಹಾಗೂ ಆಲೂರನ್ನು ಉಪಕೇಂದ್ರಗಳಾಗಿ ಗುರುತಿಸಿ ಕೆಲಸ ಮಾಡಲಿದೆ. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನ ವಸತಿ ಪ್ರದೇಶಗಳಲ್ಲಿ, ಕೃಷಿ ಪ್ರದೇಶಗಳಲ್ಲಿ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವ ಕಾರ್ಯ ಮಾಡಲಾಗುವುದು ಎಂದು ವಿವರ ನೀಡಿದರು.
ಕಾಡಾನೆ ಹಾವಳಿ ಕಂಡು ಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೆ, ಅರಣ್ಯ ಪ್ರದೇಶದ ಒಳಗೆ ಸಂಚರಿಸಿದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಪ್ರಚುರ ಪಡಿಸುವುದು. ಟಾಸ್ಕ್ ಫೋರ್ಸ್‌ನ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ಕಾರ್ಯನಿರ್ವಹಿಸುತ್ತದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಪ್ರಚುರಪಡಿಸಲಾಗುವುದು ಎಂದು ಹೇಳಿದರು.
ಆನೆ ಹಾವಳಿ ತಡೆಗಟ್ಟುವ ಮತ್ತು ಹಿಮ್ಮೆಟಿಸುವ ಕಾರ್ಯಕ್ಕೆ ಬೇಕಾಗುವ ವಾಕಿಟಾಕಿ, ಬಂದೂಕು, ಪಟಾಕಿ ಹಾಗೂ ಸರ್ವಾಜನಿಕ ಜಾಗೃತಿ ಮೂಡಿಸಲು ಉಪಯೋಗಿಸುವ ಸಲಕರಣೆಗಳು ಹಾಗೂ ಇನ್ನಿತರೆ ಅವಶ್ಯಕ ಸಲಕರಣೆ ಮತ್ತು ಸೌಲಭ್ಯಗಳನ್ನು ಕಾರ್ಯಪಡೆಗೆ ಒದಗಿಸಲಾಗುವುದು. ಅಲ್ಲದೆ, 3 ಬೊಲೆರೋ ಜೀಪ್‌ಗಳನ್ನು ನೀಡಲಾಗುವುದು. 2 ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗುವುದು ಎಂದು ತಿಳಿಸಿದರು.
ಮಕ್ನಾ ನಡೆ ಬಗ್ಗೆ ವೈಜ್ಞಾನಿಕ ಅಧ್ಯಯನ:
ಕಳೆದ ಜೂನ್- ಜುಲೈ ತಿಂಗಳಲ್ಲಿ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಿದ್ದ ಮಕ್ನಾ ಕಾಡಾನೆ ಇದೀಗ ಮರಳಿ ಬಂದಿದ್ದು, ಸಕಲೇಶಪುರ ತಾಲೂಕು ಕೆಸಗುಲಿ ಗ್ರಾಮದ ಗಿರೀಶ್ ಎಂಬುವರ ಮನೆ ಮೇಲೆ ಪದೇ ಪದೆ ದಾಳಿ ಮಾಡಿದೆ. ಈ ದಾಳಿಯ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಭಾರತ ಸಂಶೋಧನಾ ಹಾಗೂ ವಿಜ್ಞಾನ ಸಂಸ್ಥೆಯ ವಿಜ್ಞಾನಿ ನಿಶಾಂತ್ ಅವರಿಗೆ ಸೂಚಿಸಲಾಗಿದೆ. ಅವರ ನೇತೃತ್ವದಲ್ಲಿ ಅಧ್ಯಯನ ನಡೆಯಲಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗ ಸದ್ಯಕ್ಕೆ ಕೆಸಗುಲಿ ಗ್ರಾಮದ ಮನೆಗಳ ಗಾಜಿನ ಕಿಟಕಿಗಳಿಗೆ ಗಾಜಿನ ಪರದೆ ಹಾಕಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಮನೆಗಳಲ್ಲಿ ಸಂಗ್ರಹಿಸಿರುವ ಭತ್ತ ಹಾಗೂ ಇನ್ನಿತರ ದವಸ ಧಾನ್ಯಗಳ ವಾಸನೆ ಕಾಡಾನೆಗಳಿಗೆ ಸಿಗದಂತೆ ಔಷಧಿ ಸಿಂಪಡಿಸಲು ಸಹ ತಿಳಿಸಲಾಗಿದೆ ಎಂದರು.
ಸದ್ಯ ಹಾಸನ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾಡಾನೆಗಳು ನಾಲ್ಕು ಗುಂಪುಗಳಾಗಿ ಸಂಚಾರ ಮಾಡುತ್ತಿವೆ. ಒಂದೊಂದು ಗುಂಪಿನಲ್ಲಿ 15 ರಿಂದ 25 ಆನೆಗಳಿದ್ದು, ಇವುಗಳಲ್ಲಿ ಸಂತಾನೋತ್ಪತ್ತಿ ಮಾಡುವಂತಹ ಎರಡು ಹೆಣ್ಣು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕುರಿತು ಮತ್ತು ಒಂದು ಗಂಡು ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಳೆಗಾಲ ಮುಗಿದ ನಂತರ ಆನೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸೋಲಾರ್ ವಿದ್ಯುತ್ ತೂಗು ಬೇಲಿ:
ಕಾಡಾನೆ ಹಾವಳಿ ಪ್ರದೇಶದಲ್ಲಿ 11.5 ಕಿ.ಮೀ. ಉದ್ದಕ್ಕೆ ರೈಲ್ಲು ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಕಾಡಾನೆ ಹಾವಳಿ ತಡೆಗೆ ಸೋಲಾರ್ ವಿದ್ಯುತ್ ತೂಗು ಬೇಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಆಲೂರು ತಾಲೂಕು ದೊಡ್ಡ ಬೆಟ್ಟ ವ್ಯಾಪ್ತಿಯಲ್ಲಿ 3.5 ಕಿ.ಮೀ. ಸೋಲಾರ್ ವಿದ್ಯುತ್ ತೂಗು ಬೇಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅರಕಲಗೂಡು ಭಾಗದಲ್ಲಿ ಈಗಾಗಲೇ ಎರಡು ಕಿಲೋಮೀಟರ್ ಹಾಗೂ ಯಸಳೂರು ಭಾಗದಲ್ಲಿ 2 ಕಿ.ಮೀ. ಸೋಲಾರ್ ವಿದ್ಯುತ್ ತೂಗು ಬೇಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.