ಆನೆ ಕಾರಿಡರ್ ಘೋಷಣೆ ಕಾರ್ಯರೂಪಕ್ಕೆ ಬರಲಿ, ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

M.K.R. SOMESH
Published on

ಹಾಸನ: ಆನೆ ಕಾರಿಡರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ರೂ. ಮೀಸಲಿಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಶೀಘ್ರವಾಗಿ ಆನೆ ಕಾರಿಡಾರ್ ಯೋಜನೆ ಕಾರ್ಯರೂಪಕ್ಕೆ ಬಾರದಿದ್ದರೇ ಫೆಬ್ರವರಿ ಮಾಸಾಂತ್ಯದಲ್ಲಿ ವಿಧಾನಸೌಧದ ಮುಂದೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಜಯಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಎಚ್ಚರಿಸಿದರು.

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹಾಸನ ಜಿಲ್ಲೆಯ ಕಾಡಾನೆಗಳ ಉಪಟಳದಿಂದ ಆಗುತ್ತಿರುವ ಬೆಳೆ ನಷ್ಟ, ಕಾಡಾನೆ-ಮಾನವ ಸಂಘರ್ಷದಿಂದ ಆಗುತ್ತಿರುವ ಸಾವು-ನೋವುಗಳ ಬಗ್ಗೆ ಚರ್ಚಿಸಿದ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೊಡಗು ಮತ್ತು ಹಾಸನ ಜಿಲ್ಲೆಯ 2 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್‌ನಲ್ಲಿ 50 ಕೋಟಿ ರೂಗಳನ್ನು ಮೀಸಲಿಡುವುದಾಗಿ ಘೋಷಿಸಿದ್ದಾರೆ ಎಂದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೀಘ್ರವಾಗಿ ಬಜೆಟ್ ಸಂದರ್ಭದಲ್ಲೇ ಕಾರಿಡಾರ್ ಯೋಜನೆ ಕಾಮಗಾರಿ ಕಾರ್ಯರೂಪಕ್ಕೆ ಬಂದರೆ ಮಲೆನಾಡು ಭಾಗದ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಬೇಲೂರು ತಾಲೂಕಿನಲ್ಲಂತೂ ಕಾಡಾನ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಾರ್ಮಿಕರು, ರೈತರು, ಬೆಳೆಗಾರರು ದಾಳಿಗೆ ಸಿಲುಕಿ ನರಳುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಸರ್ಕಾರ, ಸಚಿವರು ಸದನದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪ್ರಗತಿಪರ ಸಂಘನೆಗಳ, ಕಾಫಿ ಬೆಳೆಗಾರರು, ರೈತ, ದಲಿತ, ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ವಿಧಾನಸೌಧ ಮುತ್ತಿಗೆ ಹಾಗೂ ಪ್ರತಿಭಟನಾ ಧರಣಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ಬೈಕ್, ಆಟೋ ರ‌್ಯಾಲಿ ಹಾಗೂ ಹಾಸನದ ಹೇಮಾವತಿ ಪ್ರತಿಮೆ ಬಳಿ ಐದು ದಿನ ಧರಣಿ ಮಾಡಿದ್ದೆವು. ನಮ್ಮ ಸಂಘಟನೆಯ ಧರಣಿ ಉಲ್ಲೇಖಿಸಿ ಜಿಲ್ಲೆಯ ಶಾಸಕರು ಸದನದಲ್ಲಿ ಚರ್ಚಿಸಿದ್ದಾರೆ. ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಅವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲಿಸಿದ್ದಾರೆ. ಈ ಸಂದರ್ಭ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ನಮ್ಮ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಧರಣಿಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮ್, ದಸಂಸ ಮುಖಂಡ ಮಲ್ಲೇಶಗ ಅಂಬೂಗ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net