

ಹೊಳೆಹೊನ್ನೂರು: ಆನವೇರಿ ಪತ್ತಿನ ಸಹಕಾರ ಸಂಘ ವಾರ್ಷಿಕ 60.85 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಹೇಂದ್ರ ಗೌಡ ಹೇಳಿದರು.
ಆನವೇರಿಯಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 1530 ಸದಸ್ಯ ಬಲದ ಸಂಘವು ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.
ಈ ಬಾರಿ ಸದಸ್ಯರಿಗೆ ಶೇ.13 ಡಿವಿಡೆಂಡ್ (ಲಾಭಾಂಶ) ನೀಡಲಾಗುವುದು. ಸಾಲ ಪಡೆಯುವುದು ನಮ್ಮ ಹಕ್ಕು. ಅದರಂತೆ ಸಕಾಲದಲ್ಲಿ ಸಾಲ ಮರುಪಾವತಿ ನಮ್ಮದೇ ಜವಾಬ್ದಾರಿ ಆಗಿರಬೇಕು. ಸಕಾಲದಲ್ಲಿ ಸಾಲ ಮರುಪಾವತಿಯಾದರೆ ಸಂಘದ ಆರ್ಥಿಕತೆ ಉತ್ತಮವಾಗುತ್ತದೆ. ಸದಸ್ಯರು ಸಹಕಾರ ಕ್ಷೇತ್ರದ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸಂಘದ ಉನ್ನತಿಗೆ ಶ್ರಮಿಸಬೇಕು ಎಂದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ಎಚ್ಚರವಹಿಸಬೇಕು. ಸಂಘದಲ್ಲಿ ನಡೆಯುವ ಸಭೆಗಳಿಗೆ ತಪ್ಪದೇ ಹಾಜರಾಗಬೇಕು. ಶೂನ್ಯ ಬಡ್ಡಿದರ ಸಾಲ ಸೌಲಭ್ಯ ಕೃಷಿಕರಿಗೆ ವರದಾನ. ರೈತರು ಸಂಘಗಳಲ್ಲಿ ವ್ಯವಹಾರ ಮಾಡುವತ್ತ ಗಮನ ಹರಿಸಬೇಕು. ಬಂಗಾರ ಅಡಮಾನ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಲ್ಲಿ ಅಡಕೆ ಅಡಮಾನ ಸಾಲ ನೀಡಲಾಗುತ್ತಿದೆ. ಪ್ರತಿ ಗುರುವಾರ ಕ್ಯಾಂಪ್ಕೋ ಸಹಯೋಗದಲ್ಲಿ ಅಡಕೆ ಮಾರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮೆಗ್ಗಾನ್ ಹಾಗೂ ಸುಬ್ಬಯ್ಯ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು. ರಾಮ್ಕೋ ನಿರ್ದೇಶಕ ಜಗದೀಶಪ್ಪ ಗೌಡ, ಕುಬೇಂದ್ರಪ್ಪ, ಇ.ಬಿ.ರಾಜಪ್ಪ, ಎ.ಜಿ ರಮೇಶ್, ಎಂ.ಜಿ.ನಾಗರಾಜ್, ಪಿ.ಮಹೇಶ್ವರಪ್ಪ, ಜಯಾನಂದಶೆಟ್ಟಿ, ಲಕ್ಷ್ಮಪ್ಪ, ಚಂದ್ರಪ್ಪ, ಲಲಿತಮ್ಮ, ಸುಶೀಲಮ್ಮ, ಕವಿತಾ, ಸಿಇಒ ಎಚ್.ವಿ. ಗಜೇಂದ್ರ, ನಾಗರಾಜ್, ಅಮಾನುಲ್ಲಾ, ಮಲ್ಲಿಕಾರ್ಜುನ್, ಗೀತಾ, ಚಂದ್ರಶೇಖರ್, ರುದ್ರೇಶ್ ಇತರರಿದ್ದರು.