

ಸೊರಬ: ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಅವಕಾಶ ನೀಡದೆ ಕೆಲ ಮುಖಂಡರು ಅಲ್ಪಸಂಖ್ಯಾತ ಸಮುದಾಯದ ಜೈನ ಮಠದ ಸ್ವಾಮೀಜಿ ಎನ್ನುವ ಕಾರಣಕ್ಕೆ ತಾರತಮ್ಯ ಧೋರಣೆ ತೋರಿದರು ಎಂದು ಲಕ್ಕವಳ್ಳಿ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆರೋಪಿಸಿದರು.
ತಾಲೂಕಿನ ಲಕ್ಕವಳ್ಳಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಶ್ರೀ ಮಠ ಪ್ರತಿ ಬಾರಿ ಮಳೆ ಆವರಿಸಿದಾಗ ವರದಾ ನದಿ ಪ್ರವಾಹದಿಂದ ನೆರೆಹಾವಳಿಗೆ ಸಿಲುಕುತ್ತಿದೆ. ಕಳೆದ ಎರಡ್ಮೂರು ವರ್ಷಗಳಿಂದ ಶ್ರೀಮಠದಲ್ಲಿ ಸಾಕಷ್ಟು ನಷ್ಟವಾಗಿದೆ. ಹಳೇ ಮಠ ಧರೆಗೆ ಉರುಳಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಅವಕಾಶ ಕೋರಿದ್ದೆವು. ಆದರೆ ಕೆಲ ಸ್ಥಳೀಯ ಮುಖಂಡರು ನಮಗೆ ಅವಕಾಶ ನೀಡದೆ ವಂಚಿತರನ್ನಾಗಿಸಿದ್ದು ಮಠದ ಭಕ್ತರಿಗೆ ಬೇಸರ ತಂದಿದೆ. ಡಿ. 19ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಶ್ರೀ ಮಠಕ್ಕೆ ವಿಶೇಷ ಅನುದಾನ ನೀಡುವ ಕುರಿತು ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು, ಸಂಸದರು, ಸಂಬಂಧಿಸಿದ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ವರದಾ ನದಿಗೆ ಮೂಗೂರು ಸಮೀಪ ಬ್ಯಾರೇಜ್ ನಿರ್ಮಿಸಿದ ತರುವಾಯ ಪ್ರತಿ ವರ್ಷ ಮಳೆಗಾಲದಲ್ಲಿ ಹಾಗೂ ಅತಿವೃಷ್ಟಿಯಾದ ಸಂದರ್ಭದಲ್ಲಿ ಮಠ ಮತ್ತು ಬಸದಿಗಳು ಮುಳುಗುತ್ತವೆ. ಪರಿಣಾಮ ಕಟ್ಟಡಗಳು ಸಂಪೂರ್ಣವಾಗಿ ನೆರೆಹಾವಳಿಗೆ ತುತ್ತಾಗಿದೆ. ವರದಾ ನದಿಗೆ ಈಗಾಗಲೇ ಏಳೆಂಟು ಕಡೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಶ್ರೀ ಮಠಕ್ಕೆ ತಡೆಗೋಡೆ ನಿರ್ಮಾಣಕ್ಕೆ ಈವರೆಗೂ ಅನುದಾನ ನೀಡದಿರುವುದು ನೋವಿನ ಸಂಗತಿ. ರಾಜ್ಯ ಸರ್ಕಾರ ಜೈನ ಮಠಗಳನ್ನು ಕಡೆಗಣಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಮತದಾನದಿಂದ ಹಿಂದುಳಿಯುವ ಮೂಲಕ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.