ಆನವಟ್ಟಿಯ ಸರ್ಕಾರಿ ಪ್ರೌಢಶಾಲೆ ರಂಗ ಮಂದಿರ ನೆಲಸಮ: ಶಾಸಕ, ಪ್ರಾಚಾರ್ಯರ ವಿರುದ್ಧ ಹಳೆಯ ವಿದ್ಯಾರ್ಥಿಗಳು, ಸ್ಥಳೀಯರ ಪ್ರತಿಭಟನೆ

WEBB WEEB SOR
Published on

ಸೊರಬ: ಗ್ರಾಮಸ್ಥರು, ಶಿಕ್ಷಕರು, ಉಪನ್ಯಾಸಕರು, ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನವಟ್ಟಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಆವರಣದಲ್ಲಿದ್ದ ರಂಗಮಂದಿರವನ್ನು ನೆಲಸಮ ಮಾಡಿರುವುದನ್ನು ಖಂಡಿಸಿ ಗುರುವಾರ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಮುಖಂಡರು ಕಾಲೇಜು ಆವರಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು.

ತಾಪಂ ಮಾಜಿ ಅಧ್ಯಕ್ಷ ಸುರೇಶ ಹಾವಣ್ಣನವರ್ ಮಾತನಾಡಿ, 16 ವರ್ಷಗಳ ಹಿಂದೆ ದಾನಿಗಳ ನೆರವಿನಿಂದ ರಂಗಮಂದಿರ ಕಟ್ಟಿಸಲಾಗಿತ್ತು. ಏಕಾಏಕಿ ರಂಗಮಂದಿರ ನೆಲಸಮ ಮಾಡಿದ್ದರಿಂದ 4000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಪ್ರಾರ್ಥನೆ, ರಾಷ್ಟ್ರಗೀತೆ ಹಾಡುವಾಗ ಮಳೆ ಬಂದರೆ ನೆನೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನದ ಊಟ, ವೇದಿಕೆ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ ಎಂಬುದನ್ನು ಶಾಸಕರು ಹಾಗೂ ಕಾಲೇಜಿನ ಪ್ರಾಚಾರ್ಯರು ಯೋಚಿಸಬೇಕಿತ್ತು ಎಂದು ಕಿಡಿಕಾರಿದರು.

ಹೊಸದಾಗಿ ರಂಗಮಂದಿರ ಕಟ್ಟಬೇಕು ಎಂಬುವುದಾದರೆ, ಪಕ್ಕದಲ್ಲೇ ನಿರ್ಮಿಸಬಹುದಿತ್ತು. ಅದನ್ನು ಬಿಟ್ಟು ಸಾರ್ವಜನಿಕರ ದೇಣಿಗೆ ಹಣದಿಂದ ಕಟ್ಟಿರುವ ರಂಗಮಂದಿರವನ್ನು ನೆಲಸಮ ಮಾಡಿದ್ದು ಸಾವಿರಾರು ದಾನಿಗಳಿಗೆ ನೋವುಂಟಾಗಿದೆ ಎಂದರು.

ಆನವಟ್ಟಿಯ ಶ್ರೀಧರ್ ಆಚಾರ್ ಮಾತನಾಡಿ, ಚೆನ್ನಾಗಿರುವ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಅಷ್ಟೊಂದು ಸರ್ಕಾರದಲ್ಲಿ ಹಣವಿದ್ದರೆ, ದಯಮಾಡಿ ಹಳ್ಳಿಗಳ ಶಾಲೆಗಳಿಗೆ ಕಟ್ಟಡಗಳಿಲ್ಲ.ಅಂತಲ್ಲಿ ಹಣ ಬಳಕೆ ಮಾಡಿ ಎಂದು ಒತ್ತಾಯಿಸಿದರು.

ಜನದನಿ ಸಂಸ್ಥಾಪಕ ಕೆ.ಇ.ವಿಜಯ್‌ಕುಮಾರ್ ಮಾತನಾಡಿ, ಮೂರು ವರ್ಷದ ಹಿಂದೆ ಮೂಡಿ ಏತ ನೀರಾವರಿ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸುತ್ತಾರೆ ಎಂದು ಶೌಚಗೃಹ ಹಾಗೂ ಕಾಂಪೌಂಡ್ ಒಡೆದು ಹಾಕಿದರು. ಇದುವರೆಗೂ ರಿಪೇರಿ ಮಾಡಿಸಿಲ್ಲ. ಕಾಲೇಜಿನ ಹಿಂಬದಿಯಲ್ಲಿ ವಿದ್ಯಾರ್ಥಿಗಳು ಮೂತ್ರ ವಿರ್ಸಜನೆ ಮಾಡುತ್ತಾರೆ. ಮೂಲ ಸೌಕರ್ಯ ಕಲ್ಪಿಸಬೇಕಾದ ಶಾಸಕರೇ ರಂಗಮಂದಿರ ನೆಲಸಮ ಮಾಡಿದರ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸಿಡಿಸಿ ಸಮಿತಿಯ ಅಧ್ಯಕ್ಷರು ಆಗಿರುವ ಶಾಸಕ ಕುಮಾರ್ ಬಂಗಾರಪ್ಪ ಅವರು ರಂಗಮಂದಿರ ಮರು ನಿರ್ಮಾಣದ ಕುರಿತು ಕೈಗೊಂಡಿರುವ ನಿರ್ಣಯವನ್ನು ಸೋಮವಾರದ ಒಳಗೆ ತಿಳಿಸಬೇಕು. ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು. ಪ್ರಾಚಾರ್ಯ ಟಿ.ಜಗದೀಶ್‌ಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಪ್ರಾಚಾರ್ಯರು, ಶಿಥಿಲ ಕಟ್ಟಡಗಳನ್ನು ನೆಲಸಮ ಮಾಡಲು ಸಿಡಿಸಿ ಸಭೆಯಲ್ಲಿ ನಡಾವಳಿ ಮಾಡಲಾಗಿತ್ತು. ಅದರಲ್ಲಿ ರಂಗಮಂದಿರ ಇರಲಿಲ್ಲ. ರಂಗಮಂದಿರ ನೆಲಸಮ ಮಾಡುತ್ತಾರೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net