

ಚಿತ್ರದುರ್ಗ: ಬರಹಗಾರ, ಕವಿ ಆನಂದ್ ಸಿ.ಲಕ್ಕೂರು ಸಾಹಿತ್ಯ ಕೃಷಿಯಲ್ಲಿ ಮಾಡಿದ ಸಾಧನೆ ನಾಡಿಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದು ಅಂಬೇಡ್ಕರ್ ವಾದಿ ಡಾ.ಹುಲಿಕುಂಟೆ ಮೂರ್ತಿ ಸಲಹೆ ನೀಡಿದರು.
ಪತ್ರಿಕಾ ಭವನದಲ್ಲಿ ಭಾನುವಾರ ಬಿಕೆ-ಕೆಬಿ ಬಳಗ, ಲಂಕೇಶ್ ವಿಚಾರ ವೇದಿಕೆಯಿಂದ ಹಮ್ಮಿಕೊಂಡಿದ್ದ ಲಕ್ಕೂರು ಆನಂದ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನಂದ್ ಯುವ ಬರಹಗಾರ. ತನ್ನ ವಯಸ್ಸಿನೊಳಗೆ ಸಾಹಿತ್ಯ, ಸಂಶೋಧನೆ, ಕಾವ್ಯದಲ್ಲಿ ಮಾಡಿರುವ ಕೆಲಸ ಅವಿಸ್ಮರಣೀಯ. ಆ ನಿಟ್ಟಿನಲ್ಲಿ ಬೇರೆಯವರು ಸಾಗಲಿ. ಆ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲಿ. ಆತನ ಬದುಕಿನ ದಾರಿ ಗ್ರಹಿಸದವರು, ಚಾರಿತ್ರ್ಯಹರಣ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದೇ ಉತ್ತಮ ಎಂದರು.
ಪ್ರಾಧ್ಯಾಪಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಆನಂದ್ ಕೂಡಾ ಮಹತ್ವಾಕಾಂಕ್ಷಿ ಬರಹಗಾರನಾಗಿದ್ದ. ತನ್ನ ಬರಹ ಓದುಗರು ಗುರುತಿಸಬೇಕು, ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಮನೋಭಾವ ಇತ್ತು. ಇದು ಖಂಡಿತ ತಪ್ಪಲ್ಲ. ಆತ ಮಾಡಿರುವ ಕಾವ್ಯ, ಸಂಶೋಧನೆ ಬಗ್ಗೆ ಹೆಚ್ಚು ಚರ್ಚೆಯಾಗಬೇಕು ಎಂದರು.
ಆಧುನಿಕ ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ಮಾತನಾಡಿ, ಜಾತಿ ವ್ಯವಸ್ಥೆಯ ವಿಕಾರ ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೂ ವಿಸ್ತರಿಸುತ್ತಿದೆ. ಆನಂದ್‌ರ ಸಾವಿನ ಸುತ್ತ ವ್ಯಕ್ತವಾದ ಅಭಿಪ್ರಾಯಗಳೇ ಇದಕ್ಕೆ ನಿದರ್ಶನ. ಈ ಮನಸ್ಥಿತಿ ಬದಲಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹಾ ಮಾತನಾಡಿ, ಆನಂದ್ ಜೀವನ ಪ್ರೀತಿಯ ಅದ್ಭುತ ಗೆಳೆಯ. ಸದಾ ಕಾವ್ಯ, ಕಾದಂಬರಿಗಳ ಕುರಿತು ಚರ್ಚಿಸುತ್ತಿದ್ದ. ಮಾತಂಗ ಮಹಿಳಾ ಸಂಸ್ಕೃತಿ ಕುರಿತು ಉತ್ತಮ ಪುಸ್ತಕ ರಚಿಸಿದ. ಹೊಸ ಸಂಶೋಧನೆಯ ಬರಹದತ್ತ ತುಡಿಯುವ ಮನಸ್ಸು ಆತನಲ್ಲಿತ್ತು ಎಂದು ಸ್ಮರಿಸಿದರು.
ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಬಗ್ಗನಡು ನಾಗಭೂಷಣ ಮಾತನಾಡಿ, ಆನಂದ್ ಚಿಕ್ಕವಯಸ್ಸಲ್ಲೇ ಉತ್ತಮ ಬರಹಗಾರನಾಗಿ ಹೊರಹೊಮ್ಮಿದವರು. ಅವರ ಬದುಕಿನ ಮೌಲ್ಯಮಾಪನ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಮಾಡಿದರೆ ಅವರೇ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ. ವ್ಯಕ್ತಿಯ ಸಾವು ಬಯಸುವ ಮತ್ತು ಸಂಭ್ರಮಿಸುವವರಿಗಿಂತ ಅದನ್ನು ಅಗೌರವಿಸುವವರು ಅಪಾಯಕಾರಿಗಳು ಎಂದರು.
ಸಾಮಾಜಿಕ ಹೋರಾಟಗಾರ ಕೊಟ್ಟ ಶಂಕರ್, ಕೋಡಿಹಳ್ಳಿ ಸಂತೋಷ್, ಚಿಂತಕ ಜೆ.ಯಾದವರೆಡ್ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಜಡೇಕುಂಟೆ ಮಂಜುನಾಥ್, ಹೊಳೆಯಪ್ಪ ಸಾಕ್ಯ ಇತರರಿದ್ದರು.