ಆನಂದೂರು ಡೇರಿ ನಿರ್ದೇಶಕರ ಮರು ನೇಮಕಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

mysore
Published on

ಮೈಸೂರು: ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಆನಂದೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅಮಾನತುಗೊಂಡಿರುವ ನಿರ್ದೇಶಕರ ಮರು ನೇಮಕಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಈ ಸಂಘಕ್ಕೆ ಕಳೆದ 35 ವರ್ಷಗಳಿಂದ ಚುನಾವಣೆ ನಡೆಸಿಲ್ಲ. ಅಲ್ಲಿದ್ದ ಕಾರ್ಯದರ್ಶಿ ತನಗೆ ಬೇಕಾದವರನ್ನು ನಿರ್ದೇಶಕರಾಗಿ ಮಾಡಿಕೊಂಡು ಅಲ್ಲಿನ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ರೈತರ ಹೋರಾಟದ ಫಲವಾಗಿ ಕಳೆದ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಿ 12 ನಿರ್ದೇಶಕರು ಆಯ್ಕೆಯಾಗಿದ್ದರು. ಆದರೆ, ಅನರ್ಹತೆ ಕಾರಣ ನೀಡಿ ವಿಚಾರಣೆ ಮಾಡದೆ 8 ನಿರ್ದೇಶಕರನ್ನು ಅಮಾನತು ಮಾಡಿ ಆಡಳಿತಾಧಿಕಾರಿ ನೇಮಿಸಲಾಗಿತ್ತು.

ಇದು ಖಂಡನೀಯ ಎಂದು ಕಿಡಿಕಾರಿದರು.

ಅಮಾನತುಗೊಂಡಿರುವ ಸದಸ್ಯರನ್ನು ಮರು ನೇಮಿಸಬೇಕು. ಕಾಲಾವಕಾಶ ನೀಡದೆ ತರಾತುರಿಯಲ್ಲಿ ತೀರ್ಮಾನ ಕೈಗೊಂಡ ಸಹಕಾರ ಸಂಸ್ಥೆಗಳ ಸಹಾಯಕ ನಿಬಂಧಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಫಲವಾಗಿ ನಿರ್ದೇಶಕರ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇದರ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಲಾಯಿತು.

ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ನಾಗನಹಳ್ಳಿ ವಿಜೇಂದ್ರ, ಪ್ರಕಾಶ್‌ರಾಜೇ ಅರಸ್, ಆನಂದಪ್ರಭಾಕರ್, ರಾಘವೇಂದ್ರ, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net