ಆನಂದವಾಗಿ ಬದುಕಲು ಜೀವನ ರೂಢಿಸಿಕೊಳ್ಳಿ:ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

ಆನಂದವಾಗಿ ಬದುಕಲು ಜೀವನ ರೂಢಿಸಿಕೊಳ್ಳಿ:ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Published on

ಹಾಸನ: ಸುಖ ಇದ್ದಾಗ ಸಂತೋಷ ಪಡದೆ ಹೋದರೆ ಕಷ್ಟ ಇದ್ದಾಗ ಸಂತೋಷ ಪಡಲು ಸಾಧ್ಯವಿಲ್ಲ, ಆನಂದವಾಗಿ ಬದುಕಲು ಜೀವನ ರೂಢಿಸಿಕೊಳ್ಳಬೇಕು ಎಂದು ಆದಿಚುಮಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಮಚನಗಿರಿ ಶಾಖಾ ಮಠದಲ್ಲಿ ಬಿಜಿಎಸ್ ಪಿಯು ಕಾಲೇಜು ಬೇಲೂರು ಮತ್ತು ಹಾಸನ ವಿದ್ಯಾರ್ಥಿಗಳಿಗೆ ಶುಕ್ರವಾರ ಸ್ವಾಗತೋತ್ಸವ ಮತ್ತು ನೀಟ್, ಜೆಇಇ, ಸಿಇಟಿ ತರಗತಿ ಪ್ರಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದ ಅವರು, ಜೀವನದಲ್ಲಿ ಸಂತೋಷ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ದಿನದಲ್ಲಿ 8 ಗಂಟೆ ಮಲಗಿದರೆ 2 ಗಂಟೆ ಮಾತ್ರ ನಿದ್ದೆ ಸಿಗುತ್ತದೆ. ಉಳಿದ 6 ಗಂಟೆ ಕಾಲ ಕನಸು ಕಾಣುತ್ತೇವೆ. ಕನಸು ನನಸಾಗಬೇಕಾದರೆ ಸಂತೋಷ, ಸಂತೃಪ್ತಿ ಇರಬೇಕು ಎಂದರು.

ಪ್ರತಿ ವಿದ್ಯಾರ್ಥಿ ತಮ್ಮದೆಯಾದ ಗುರಿ ಹೊಂದಿ ಸಾಧನೆ ಮಾಡುವ ಛಲ ಬೆಳೆಸಿಕೊಳ್ಳಬೇಕು. ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಗುರಿಯತ್ತ ಕಾಲಿಡಬೇಕು. ಓದುವ ವೇಳೆ ಸಮಯ ವ್ಯರ್ಥ ಮಾಡಿಕೊಂಡರೆ ಮತ್ತೆ ಆ ಸಮಯ ವಾಪಸ್ ಬರುವುದಿಲ್ಲ ಎಂದು ಕಿವಿ ಮಾತು ಹೇಳಿದರು.

ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಈ ಹಂತ ಮುಖ್ಯವಾಗಿದೆ. ಯಾವುದೇ ಒಂದು ಕೆಲಸ ಆಗಲಿ, ಶಿಕ್ಷಣ ಆಗಲಿ ಅದರಲ್ಲಿ ಶ್ರದ್ಧೆ, ಭಕ್ತಿ, ವಿನಯತೆ ಮತ್ತು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಂಡಿದ್ದರೆ ಮಾತ್ರ ಆ ವಿದ್ಯಾರ್ಥಿ ಗುರಿ ಸಾಧಿಸಬಹುದು ಎಂದು ಹೇಳಿದರು.

ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠ ಎಂದರೆ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮತ್ತು ಅನ್ನದಾಸೋಹ ಮಾಡಿದೆ, ಮಾಡುತ್ತಿದೆ. ನಾನು ಒಬ್ಬ ಶಾಸಕನಾಗಿ ಮಠದ ಯಾವುದೇ ಒಂದು ಕೆಲಸ ಕಾರ್ಯ ಇದ್ದರೂ ಸಹಕಾರ ನೀಡಿ ಕೆಲಸ ಮಾಡುವೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆಯುತ್ತಿದ್ದು, ನೀಟ್, ಜೆಇಇ, ಕೆ-ಸಿಇಟಿ ಪರೀಕ್ಷೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದು ಕರೆ ನೀಡಿದರು. ಮೊಬೈಲ್ ನೋಡುವ ಸಮಯದಲ್ಲಿ ಓದುವ ಕಡೆ ಗಮನ ಹರಿಸಿ.ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂದರು.

ಆದಿಚುಂಚನಗಿರಿ ಶಾಖ ಮಠ ಶಂಭುನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್ ಕಾಲೇಜಿನ ಆಡಳಿತಾಧಿಕಾರಿ ಎ.ಟಿ. ಶಿವರಾಮ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶ್‌ಗೌಡ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net