

ಬಸವಕಲ್ಯಾಣ: ಮನಸ್ಸಿನ ಪ್ರಸನ್ನತೆ, ಬದುಕಿನ ಆನಂದಕ್ಕೆ ಶರಣರ ವಚನ ಅನುಭಾವ ಕೇಳುವುದೇ ದಿವ್ಯ ಔಷಧ ಎಂದು ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಅನುಭವ ಮಂಟಪದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೩ ಹಾಗೂ ಅಲ್ಲಮಪ್ರಭುದೇವರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ನಡೆ-ನುಡಿ ಶುದ್ಧವಾಗಿರಬೇಕು. ನಿತ್ಯ ಜೀವನದಲ್ಲಿ ಯಾವುದೇ ಏರುಪೇರಾದರು ಮನಸ್ಸು ಮಾತ್ರ ಪ್ರಸನ್ನವಾಗಿರಬೇಕು. ಆರೋಗ್ಯಪೂರ್ಣ ಬದುಕು ನಮ್ಮದಾಗಬೇಕು ಎಂದಾದರೆ ಇದಕ್ಕೆ ಇರುವ ಮಾರ್ಗ ಒಂದೇ ಅನುಭಾವ ಕೇಳುವುದು ಎಂದರು.
ನಾನು ಎನ್ನುವ ಭಾವ ಹೋಗಿ ನೀನು ಎನ್ನುವ ಭಾವ ಬಂದಾಗ ಜೀವನ ಆನಂದಮಯವಾಗುತ್ತದೆ. ಈ ಭಾವ ಬರುಬೇಕಾದರೆ ಇಂಥ ಕಾರ್ಯಕ್ರಮಗಳಿಗೆ ಅನುಭವ ಕೇಳಲು ಬರಬೇಕು. ಅನುಭವದ ಮಾರ್ಗದಲ್ಲಿ ನಡೆಯುವರನ್ನು ಕರೆಸಿ ಅನುಭಾವ ನೀಡಬೇಕು ಎನ್ನುವುದೇ ಕಾರ್ಯಕ್ರಮದ ಆಶಯವಾಗಿದೆ ಎಂದು ಹೇಳಿದರು.
ಕಲಬುರಗಿಯ ಸಾಹಿತಿ ಡಾ.ಜಯಶ್ರೀ ದಂಡೆ ವಿಶೇಷ ಉಪನ್ಯಾಸ ನೀಡಿ, ಬಸವಾದಿ ಶರಣರ ವಚನಗಳು ಅನುಭಾವಿಕ ನೆಲೆಗಟ್ಟಿನ ಮೇಲೆ ನಿಂತಿವೆ ಎಂದು ಹೇಳಿದರು.
ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿದರು. ಪೂಜ್ಯ ಮಾತೆ ಸುಗುಣಾತಾಯಿ ಸಮ್ಮುಖ ವಹಿಸಿದ್ದರು. ಸಾಹಿತಿ ಡಾ.ವೀರಣ್ಣ ದಂಡೆ, ಡಾ.ರೇಖಾ ಮಹಾಜನ, ಆಕಾಶ ಖಂಡಾಳೆ, ಸಂತೋಷ ತಾಂಬೋಳೆ, ಗಂಗಮ್ಮ ಪಾಟೀಲ್ ಅಟ್ಟರಗಾ, ಇದ್ದರು. ವಿಜಯಲಕ್ಷ್ಮೀ ಗುಂಡಪ್ಪ ಶೆಟ್ಟಿ ಬಸವ ಗುರು ಪೂಜೆ ನೆರವೇರಿಸಿದರು. ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಪ್ರಾಸ್ತಾವಿಕ ಮಾತನಾಡಿದರು. ಡಾ.ಮೀನಾಕ್ಷಿ ಬಿರಾದಾರ ಸ್ವಾಗತಿಸಿದರು. ಅಶೋಕ ಕುಂಬಾರ ವಂದಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಲಕ್ಷ್ಮೀಬಾಯಿ ಪಾಟೀಲ ವಚನ ಗಾಯನ ಮಾಡಿದರು.
ಜಗತ್ತು ಕಂಡಿರುವ ಅಪರೂಪದ ಮಹಾ ಶಿವಯೋಗಿ, ಪರಮ ಯೋಗಿಗಳು ಅಲ್ಲಮ ಪ್ರಭು ದೇವರು. ಜಗತ್ತಿನ ಸಾಹಿತ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕಲ್ಪಿಸಿದವರು ಬಸವಾದಿ ಶರಣರು. ಭಕ್ತಿ, ಅನುಭಾವ, ದಾಸೋಹ, ಸೇವೆ ಲಿಂಗಾಯತ ಧರ್ಮದ ಜೀವಾಳ ಎನ್ನುವುದನ್ನು ಅರಿತು ಇವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.
| ಶ್ರೀ ಶಿವಾನಂದ ಸ್ವಾಮೀಜಿ ಸಂಚಾಲಕರು ಅನುಭವ ಮಂಟಪ