ಆನೆ ದಾಳಿಯಿಂದ ಮೂವರಿಗೆ ಗಾಯ

13blrp2
Published on

ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಬಾಳಗುಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸೌದೆ ತರಲು ಹೋಗಿದ್ದ ಇಬ್ಬರು ಹಾಗೂ ಕಾರ್ಮಿಕ ಮಹಿಳೆ ಮೇಲೆ ಶನಿವಾರ ಕಾಡಾನೆ ದಾಳಿ ನಡೆಸಿ ಗಂಭೀರ ವಾಗಿ ಗಾಯಗೊಳಿಸಿದೆ.


ಮಲಸಾವರ ಗ್ರಾಮದ ಗಣೇಶ್, ಅರೇಹಳ್ಳಿ ಹಳೇ ಸಂತೆಮಾಳದ ನಿವಾಸಿ ಧರ್ಮೋಧರ, ಅರೇಹಳ್ಳಿ ಉಲ್ಲಾಸ ನಗರದ ಕಾರ್ಮಿಕ ಮಹಿಳೆ ಪರಮೇಶ್ವರಿ ಗಂಭೀರ ಗಾಯಗೊಂಡು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ತಾಲೂಕಿನ ಅರೇಹಳ್ಳಿ ಗ್ರಾಮದ ನಂಜಪ್ಪ ಸ್ಟೋರ್ ಮಾಲೀಕ ಮಾದೇಗೌಡ ಶುಕ್ರವಾರ ನಿಧನರಾಗಿದ್ದರು. ಅಂತ್ಯಸಂಸ್ಕಾರಕ್ಕಾಗಿ ಕಾಡಿನಲ್ಲಿ ಸೌದೆ ಸಂಗ್ರಹಿಸಲು ಸಮೀಪದ ಬೇಲೂರು-ಸಕಲೇಶಪುರ ಗಡಿ ಭಾಗದ ಕಾಡಿಗೆ ಗಣೇಶ್ ಹಾಗೂ ಧರ್ಮೋಧರ ಹೋಗಿದ್ದರು. ಸೌದೆಯನ್ನು ಯಂತ್ರದಿಂದ ತುಂಡರಿಸುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ಇಬ್ಬರ ಮೇಲೂ ದಾಳಿ ಮಾಡಿದೆ. ಜತೆಗೆ ಅನತಿ ದೂರದಲ್ಲಿದ್ದ ಹಮೀದ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರಿ ಮೇಲೂ ದಾಳಿ ನಡೆಸಿದೆ. ಈ ವೇಳೆ ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಜೋರಾಗಿ ಕೂಗಿಕೊಂಡ ಪರಿಣಾಮ ಆನೆ ಸ್ಥಳದಿಂದ ಕಾಲ್ಕಿತ್ತಿದೆ.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಬೇಲೂರು-ಸಕಲೇಶಪುರ ಆನೆ ಕಾರ್ಯಪಡೆ ಸಿಬ್ಬಂದಿ ಗಾಯಾಳುಗಳನ್ನು ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net