ಆಧ್ಯಾತ್ಮಿಕತೆಯಿಂದ ನೆಮ್ಮದಿ ಜೀವನ

PH 06
Published on

ಸೇಡಂ: ಆಧುನಿಕತೆಯ ಭರಾಟೆಯಲ್ಲಿ ನಾವೆಲ್ಲರೂ ಅಧ್ಯಾತ್ಮ ಹಾಗೂ ಸಂಸ್ಕೃತಿಯಿಂದ ದೂರವುಳಿಯುತ್ತಿದ್ದೇವೆ. ಆದರೆ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಹೇಳಿದರು.

ನಾಗಮುರುಗೇಂದ್ರ ಮಠದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಪಂಚಾಕ್ಷರ ಸ್ವಾಮಿಗಳ ಮೌನಾನುಷ್ಠಾನ ಆರಂಭೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಪೂಜ್ಯರು ಧರ್ಮ ಜಾಗೃತಿಯ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ಸರಿದಾರಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಕಾರ್ಯಕ್ಕೆ ಪ್ರತಿಯೊಬ್ಬರೂ ಸಾಥ್ ನೀಡಬೇಕಿದೆ ಎಂದರು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್ ಮಾತನಾಡಿ, ಜಗತ್ತಿನಲ್ಲಿಯೇ ಭಾರತದಲ್ಲಿ ಮಾತ್ರ ಹಿಂದು ಧರ್ಮ ಉಳಿದಿದೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ನಮ್ಮಲ್ಲಿನ ಸಂಸ್ಕಾರ ಹಾಗೂ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಅದನ್ನು ಉಳಿಸಿ- ಬೆಳಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಮಕ್ಕಳಿಗೆ ಭವ್ಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸೇಡಂ ಉತ್ಸವ ಸಮಿತಿ ಕಾರ್ಯದರ್ಶಿ ನಾಗೇಂದ್ರಪ್ಪ ಡೊಳ್ಳಾ, ನಿವೃತ್ತ ಶಿಕ್ಷಕ ವಿಠ್ಠಲ್ ಭರಮಕರ್, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಮುನ್ನೂರ, ಪ್ರಮುಖರಾದ ನಾಗಯ್ಯಸ್ವಾಮಿ ಬೊಮ್ನಳ್ಳಿ, ಬಸವರಾಜ ಬಾಳಿ, ರಾಚಣ್ಣ ಬಳಗಾರ ಇತರರಿದ್ದರು.
ವೆಂಕಟೇಶ ನಗರದ ಅಕ್ಕನ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net