ಆಧ್ಯಾತ್ಮಿಕ ಶಕ್ತಿಯಿಂದ ಸಮಾಜದಲ್ಲಿ ಪರಿವರ್ತನೆ

Aluru 02
ಆಲೂರು ತಾಲೂಕಿನ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆರಾಧನಾ ಕಾರ್ಯಕ್ರಮ ನಡೆಯಿತು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಚೇತನ ದೇವರು,ಪ್ರಶಾಂತ್ ದೇವರು, ಡಾ.ಜಯರಾಜ್ ಮೆಣಸಮಕಿ, ಎಸ್.ಎಸ್ ಶಿವಮೂರ್ತಿ ಸಿದ್ದಾಪುರ ಉಪಸ್ಥಿತರಿದ್ದರು.
Published on

ಆಲೂರು: ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ದ್ವಿತೀಯ ಆರಾಧನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿಯೇ ನಮ್ಮ ದೇಶ ಆಧ್ಯಾತ್ಮಿಕ ಸಂಪತ್ತಿನಿಂದ ಗುರುತಿಸಿಕೊಂಡಿದೆ. ಆಧ್ಯಾತ್ಮಿಕ ಶಕ್ತಿ ಸಮಾಜದಲ್ಲಿ ಪರಿವರ್ತನೆ ತರುತ್ತದೆ. ಜಗದ್ಗುರು ರೇಣುಕಾಚಾರ್ಯರು ನೆಲೆಸಿದ ಈ ನೆಲದಲ್ಲಿ ಅದ್ಭುತ ಶಕ್ತಿ ಇದೆ. ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಎಲ್ಲರೂ ಒಂದೇ ಎನ್ನುವ ಸಾಮರಸ್ಯ ಹೊಂದಿದ ಭಾರತವು ವಿಶ್ವರೂಪದ ಬೆಳಕು ನೀಡಿದೆ, ಮನುಷ್ಯತ್ವದ ಸತ್ವವೇ ಧರ್ಮವಾಗಿದೆ. ಧರ್ಮವು ಸಕಲರಿಗೂ ಲೇಸನ್ನೇ ಬಯಸುವಂತಿರಬೇಕು. ಅನ್ನ, ಅಕ್ಷರ ದಾಸೋಹವನ್ನು ನೀಡುವ ಮೂಲಕ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ಮಠಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿರುವ ಎಲ್ಲ ದೈವಗಳಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಮಾಡಲಾಯಿತು. ಜತೆಗೆ ಶ್ರೀಮಠದ ಆವರಣದಲ್ಲಿ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸ್ಮರಣಾರ್ಥ ರುದ್ರಾಕ್ಷಿ ಗಿಡ ನೆಡಲಾಯಿತು.

ಕೋಡಿಮಠದ ನಿಯೋಜಿತ ಉತ್ತರಾಧಿಕಾರಿ ಚೇತನ ದೇವರು, ಹೈನಹಳ್ಳಿ ಮಠದ ನಿಯೋಜಿತ ಉತ್ತರಾಧಿಕಾರಿ ಪ್ರಶಾಂತ್ ದೇವರು, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಡಾ.ಜಯರಾಜ್ ಮೆಣಸಮಕಿ, ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಸ್.ಎಸ್ ಶಿವಮೂರ್ತಿ ಸಿದ್ದಾಪುರ, ಕಾಫಿ ಬೆಳೆಗಾರರ ಸಂಘದ ಮಾಜಿ ಮಹೇಶ್ ಚಿಕ್ಕೋಟೆ, ಶಿಕ್ಷಕ ಸಾಹಿತಿ ಪರಮೇಶ್ ಮಡಬಲು, ಕಾರ್ಜುವಳ್ಳಿ ಗ್ರಾಮದ ಮುಖಂಡರು, ಮಠದ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net