ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಶ್ರೀ.ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ

ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಶ್ರೀ.ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ
Published on

ಆಲೂರು : ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ.ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ  ಲಿಂ. ಶ್ರೀ ಷ ಬ್ರ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳವರ ದ್ವಿತೀಯ ವರ್ಷದ ಆರಾಧನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು, ಜಗತ್ತಿನಲ್ಲಿಯೇ ನಮ್ಮ ದೇಶ ಆಧ್ಯಾತ್ಮಿಕ ಸಂಪತ್ತಿನಿಂದ ಗುರುತಿಸಿಕೊಂಡಿದೆ. ಆಧ್ಯಾತ್ಮಿಕ ಶಕ್ತಿ ಸಮಾಜದಲ್ಲಿ ಪರಿವರ್ತನೆ ತರುತ್ತದೆ. ಜಗದ್ಗುರು ರೇಣುಕಾಚಾರ್ಯರು ನೆಲೆಸಿದ ಈ  ನೆಲದಲ್ಲಿ ಅದ್ಭುತ ಶಕ್ತಿ ಇದೆ. ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಎಲ್ಲರೂ ಒಂದೇ ಎನ್ನುವ ಸಾಮರಸ್ಯ ಹೊಂದಿದ ಭಾರತವು ವಿಶ್ವರೂಪದ ಬೆಳಕು ನೀಡಿದೆ, ಮನುಷ್ಯತ್ವದ ಸತ್ವವೇ ಧರ್ಮವಾಗಿದೆ.

ಧರ್ಮವು ಸಕಲರಿಗೂ ಲೇಸನ್ನೇ ಬಯಸುವಂತಿರಬೇಕು. ಅನ್ನ, ಅಕ್ಷರ ದಾಸೋಹವನ್ನು ನೀಡುವ ಮೂಲಕ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ಮಠಗಳು  ಸಹಕಾರಿಯಾಗಿವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ  ಶ್ರೀ ಮಠದಲ್ಲಿರುವ ಎಲ್ಲಾ ದೈವಗಳಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯ ನೆರವೇರಿತು. ಜೊತೆಗೆ ಶ್ರೀ ಮಠದ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀ ವನದುರ್ಗ ಪರಮೇಶ್ವರಿ ಅಮ್ಮನವರ ದೇವಸ್ಥಾನದ ಬಳಿ ಲಿಂ. ಶ್ರೀ. ಷ. ಬ್ರ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳವರ ಸ್ಮರಣಾರ್ಥ ರುದ್ರಾಕ್ಷಿ ಗಿಡ ನೆಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ. ಚೇತನ ದೇವರು ನಿಯೋಜಿತ ಉತ್ತರಾಧಿಕಾರಿ ಕೊಡಿಮಠ  ಹಾರನಹಳ್ಳಿ, ಶ್ರೀ ಪ್ರಶಾಂತ್ ದೇವರು ನಿಯೋಜಿತ ಉತ್ತರಾಧಿಕಾರಿ ಹೈನಹಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯದರ್ಶಿ ಡಾ. ಜಯರಾಜ್ ಮೆಣಸಮಕಿ, ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಸ್.ಎಸ್ ಶಿವಮೂರ್ತಿ ಸಿದ್ದಾಪುರ, ಕಾಫಿ ಬೆಳೆಗಾರರ ಸಂಘದ ಮಾಜಿ ಮಹೇಶ್ ಚಿಕ್ಕೋಟೆ, ಶಿಕ್ಷಕ ಸಾಹಿತಿ ಪರಮೇಶ್ ಮಡಬಲು, ಕಾರ್ಜುವಳ್ಳಿ ಗ್ರಾಮದ ಎಲ್ಲಾ ಮುಖಂಡರು ಹಾಗೂ ಸುತ್ತಮುತ್ತಲಿನ ಮಠದ  ಸದ್ಭಕ್ತರು ಹಾಜರಿದ್ದರು, 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net