

ಹುಬ್ಬಳ್ಳಿ: ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ‘ಆಧ್ಯಾತ್ಮಿಕ ಪ್ರವಚನ’ಕ್ಕೆ ಗೋಕುಲ ಗ್ರಾಮದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಮಾ. 1ರಿಂದ ಒಂದು ತಿಂಗಳವರೆಗೆ ಹುಬ್ಬಳ್ಳಿ ಹೊರವಲಯದ ಗೋಕುಲ ಗ್ರಾಮದ ರೇವಡಿಹಾಳ ರಸ್ತೆಯಲ್ಲಿ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ರೇವಡಿಹಾಳ ರಸ್ತೆ ಪಕ್ಕದ ಸುಮಾರು 10 ಎಕರೆ ಕೃಷಿ ಜಮೀನು ಆಧ್ಯಾತ್ಮಿಕ ಪ್ರವಚನದ ತಾಣವಾಗಿ ಬದಲಾಗುತ್ತಿದೆ.
ಬಸವಂತಪ್ಪ ಹೊಸಮನಿ ಕುಟುಂಬದವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಹಿಂಗಾರಿ ಬೆಳೆ ಪಡೆದ ನಂತರ ಬಿತ್ತನೆಗೆ ಮತ್ತೆ ಹದಗೊಳಿಸದೇ, ಆಧ್ಯಾತ್ಮಿಕ ಚಿಂತನೆಯ ಬಿತ್ತನೆಗಾಗಿ ಜಮೀನನ್ನು ನೀಡಲಾಗಿದೆ. ಒಟ್ಟು 10 ಎಕರೆ ಜಮೀನಿನಲ್ಲಿ ಪ್ರವಚನಕ್ಕಾಗಿ 4 ಎಕರೆ ಬಳಸಿಕೊಳ್ಳಲಾಗುತ್ತಿದ್ದು, ಸುತ್ತಲೂ ಹಸಿರು ಬಲೆಯ ತಾತ್ಕಾಲಿಕ ಆವರಣ ಗೋಡೆ ನಿರ್ವಿುಸಲಾಗಿದೆ. ಪ್ರತಿ ದಿನ 40 ಸಾವಿರ ಜನರು ಪ್ರವಚನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೆಚ್ಚಿನ ಜನರು ಬಂದರೆ ಆವರಣ ಗೋಡೆ ಅಗಲೀಕರಿಸುವ ಯೋಜನೆ ಇದೆ. ಪ್ರವಚನ ನಡೆಯುವ ಸ್ಥಳ ಹಾಗೂ ಅಕ್ಕಪಕ್ಕದ ಹೊಲವನ್ನು ರೋಲರ್ನಿಂದ ಗಟ್ಟಿಗೊಳಿಸಲಾಗುತ್ತಿದೆ. ನಿತ್ಯ 3-4 ಟ್ರಾ್ಯಕ್ಟರ್ಗಳಿಂದ ನೀರು ಸಿಂಪಡಿಸಲಾಗುತ್ತಿದೆ. ಭಕ್ತರು ಆಸೀನರಾಗಲು ಗ್ರೀನ್ ಮ್ಯಾಟ್ ಹೊದಿಸಲಾಗುತ್ತದೆ.
ಪ್ರವಚನ ಉದ್ಘಾಟನೆ ದಿನ 16/30 ಅಗಲ-ಉದ್ದದ ವೇದಿಕೆ ನಿರ್ವಿುಸಲಾಗುತ್ತದೆ. ನಂತರ ವೇದಿಕೆಯನ್ನು 16/20 ಅಳತೆಗೆ ಇಳಿಸಲಾಗುತ್ತಿದ್ದು, ಶ್ರೀ ಸಿದ್ಧೇಶ್ವರ ಸ್ವಾಮಿ ಅವರೊಬ್ಬರೇ ವೇದಿಕೆ ಅಲಂಕರಿಸಲಿದ್ದಾರೆ. ಪ್ರವಚನಕ್ಕೆ ಭಕ್ತರನ್ನು ಕರೆದುಕೊಂಡು ಬರಲು ಅವಳಿ ನಗರದ ಪ್ರತಿ ಬಡಾವಣೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗುತ್ತದೆ. ಗೋಕುಲ ಗ್ರಾಮದ ಕೆರೆ ಪಕ್ಕದಲ್ಲಿ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ಇನ್ನಿತರ ವಾಹನಗಳಿಗೆ ರ್ಪಾಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಆಧ್ಯಾತ್ಮಿಕ ಪ್ರವಚನ ಪ್ರಾರಂಭಕ್ಕೆ 1 ದಿನವಷ್ಟೇ ಬಾಕಿ ಇದೆ. ಗೋಕುಲ ಗ್ರಾಮ ಸ್ವಚ್ಛಗೊಳಿಸುವ ಕಾರ್ಯವೂ ನಡೆದಿದ್ದು, ಮಹಾನಗರ ಪಾಲಿಕೆ ಪೌರ ಕಾರ್ವಿುಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದ್ದು, ರಸ್ತೆ ಉದ್ದಕ್ಕೂ ತೋರಣ ಕಟ್ಟಲಾಗಿದೆ. ಗ್ರಾಮದ ಪ್ರವೇಶಕ್ಕೆ ಮೊದಲು ರಸ್ತೆಗೆ ದೊಡ್ಡ ಸ್ವಾಗತ ಕಮಾನು ಅಳವಡಿಸಲಾಗಿದೆ. ಪ್ರವಚನಕ್ಕೆ ಸ್ವಾಗತ ಕೋರುವ ಕಟೌಟ್ಗಳು ಗ್ರಾಮದ ಹೊರಗೆ ಮತ್ತು ಒಳಗೆ ರಾರಾಜಿಸುತ್ತಿವೆ. ನಿತ್ಯ ಬೆಳಗ್ಗೆ 6.30 ರಿಂದ 7.30ರವರೆಗೆ ಪ್ರವಚನ ನಡೆಯಲಿದೆ. ನಿತ್ಯ 35-40 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ. ಶಿವಣ್ಣ ಮುದ್ದಿ ಆಂಡ್ ಸನ್ಸ್ ಅವರ ತಾರಿಹಾಳದ ಮಾವಿನ ತೋಟದಲ್ಲಿನ ನೂತನ ಕಟ್ಟಡದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವಾಸ್ತವ್ಯ ಮಾಡಲಿದ್ದಾರೆ.ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರತಿ ಭಾನುವಾರ ಸಂಜೆ 5 ರಿಂದ 6ರವರೆಗೆ ಇಂಗ್ಲಿಷ್ನಲ್ಲಿ ಪ್ರವಚನ ನೀಡುವರು. ನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ತೋಟದಲ್ಲಿ ಸಮಾನಮನಸ್ಕ ಭಕ್ತರಿಂದ ಅನ್ನದಾಸೋಹ ಏರ್ಪಡಿಸಲಾಗಿದೆ. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಕಚೇರಿಯನ್ನು ಗೋಕುಲ ಗ್ರಾಮದ ಆರೇರ ಪ್ಲಾಜಾದಲ್ಲಿ ತೆರೆಯಲಾಗಿದೆ. ಮಾಹಿತಿಗೆ ಪ್ರವಚನ ಸೇವಾ ಸಮಿತಿಯ ಆಯೋಜಕರಲ್ಲಿ ಒಬ್ಬರಾದ ಮಹೇಶ ದ್ಯಾವಪ್ಪನವರ (94480 74766) ಅವರನ್ನು ಸಂರ್ಪಸಬಹುದು.
ವಿವಿಧ ಶ್ರೀಗಳು ಭಾಗಿ: ಮಾ. 1ರಂದು ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ದೊರೆಯಲಿದೆ. ಮೂರುಸಾವಿರ ಮಠದ ಶ್ರೀಗಳು, ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ, ನೂತನ ಪೀಠಾಧಿಪತಿ ಶ್ರೀ ಸದಾಶಿವಾನಂದ ಸ್ವಾಮೀಜಿ, ಅಕ್ಕಿಹೊಂಡ ಹೊಸಮಠದ ಶ್ರೀ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಗೋಕುಲ ದಯಾನಂದ ಆಶ್ರಮದ ಶ್ರೀ ಚಿದ್ರೂಪಾನಂದ ಸ್ವಾಮೀಜಿ, ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಹುಲ್ಯಾಳ ಮಲ್ಲಿಕಾರ್ಜುನ ಗುರುದೇವ, ತಪೋವನದ ಶ್ರೀ ಹರ್ಷಾನಂದ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ದೇವರು ಹಾಗೂ ಘೋಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.