

ಬೆಳಗಾವಿ: ಪ್ರಾಚೀನ ಕಾಲದಿಂದಲೇ ನಮ್ಮ ಪೂರ್ವಜರು ದೇವಾಲಯಗಳನ್ನು ಕೇವಲ ಪೂಜೆಯ ಕೇಂದ್ರಗಳಲ್ಲದೇ, ಆಧ್ಯಾತ್ಮಿಕ, ಕಲಾ, ಶಿಲ್ಪ, ಜ್ಞಾನ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿ ಬೆಳೆಸಿದ್ದಾರೆ. ನಮ್ಮ
ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ದೇವಾಲಯಗಳು ಅತ್ಯಂತ ಪ್ರಮುಖ ಸ್ಥಾನ ಹೊಂದಿವೆ. ಈ ಧಾರ್ಮಿಕ ಪರಂಪರೆಯನ್ನು ಮುಂದುವರಿಸಲು ಬೆಳಗಾವಿ ರಡ್ಡಿ ಸಂಘ, ಶ್ರೀ ಬಾಲಾಜಿ ದೇವಸ್ಥಾನ ಟ್ರಸ್ಟ್ ಸಂಕಲ್ಪ ಮಾಡಿದೆ.
ಇಂದಿನ ಮಾಹಿತಿ ತಂತ್ರಜ್ಞಾನ ಕಾಲದಲ್ಲಿಯೂ ಧಾರ್ಮಿಕ ಪರಂಪರೆ ಮುಂದುವರಿಸುವ ಉದ್ದೇಶದಿಂದ ಬೆಳಗಾವಿ ರಡ್ಡಿ ಸಂಘ, ಶ್ರೀ ಬಾಲಾಜಿ ದೇವಸ್ಥಾನ ಟ್ರಸ್ಟ್ ಬೆಳಗಾವಿ ನಗರದ ಹೊರವಲಯದ ಕೆ.ಕೆ.ಕೊಪ್ಪ ಗ್ರಾಮದ ಪ್ರಶಾಂತ ವಾತಾವರಣದಲ್ಲಿ ‘ಶ್ರೀ ವೆಂಕಟೇಶ್ವರ ದೇವಸ್ಥಾನ’, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೆ ನಿರ್ಧರಿಸಿದೆ.
ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ 6 ಎಕರೆ ವಿಶಾಲವಾದ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ‘ಶ್ರೀ ವೆಂಕಟೇಶ್ವರ ದೇವಸ್ಥಾನ ಹಾಗೂ 5 ಕೋಟಿ ರೂ. ವೆಚ್ಚದಲ್ಲಿ ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿ ಹಾಗೂ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಇಲ್ಲಿ ದೇವಸ್ಥಾನ ನಿರ್ಮಾಣ ಆಗುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶ ಹೆಚ್ಚುತ್ತವೆ. ಜತೆಗೆ ಪ್ರವಾಸಿಗರ ಭೇಟಿ ಹೆಚ್ಚಳದಿಂದ ಸ್ಥಳೀಯರು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ.
ಇಂದು ದೇವಸ್ಥಾನ ಭೂಮಿ ಪೂಜೆ, ಅಡಿಗಲ್ಲು ಸಮಾರಂಭ: ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣದ ಭೂಮಿಪೂಜೆ ಮತ್ತು ಅಡಿಗಲ್ಲು ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹರಿಹರ ತಾಲೂಕಿನ ಎರೆಹೊಸಳ್ಳಿ ಗ್ರಾಮದ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ವಹಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ವೆಂಕಟೇಶ್ವರ ದೇವಸ್ಥಾನಕ್ಕೆ , ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಾಲಾಜಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮುದಾಯದ ಸಹಭಾಗಿತ್ವದಿಂದ ನಿರ್ಮಾಣವಾಗುತ್ತಿರುವ ಶ್ರೀವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಹಾಗೂ ಕಲ್ಯಾಣ ಮಂಟಪ ಭವಿಷ್ಯದ ದಿನಗಳಲ್ಲಿ ಪವಿತ್ರ ಉತ್ಸವ ಕೇಂದ್ರವಾಗಲಿದೆ. ರಡ್ಡಿ ಸಮುದಾಯ ಒಂದಾಗಬೇಕು, ಎಲ್ಲರಂತೆ ಎಲ್ಲ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಬೇಕು. ಈಗಾಗಲೇ ರಡ್ಡಿ ಸಮುದಾಯಕ್ಕಾಗಿ ನನ್ನ ಸ್ವಂತ ದುಡಿಮೆಯಿಂದ 25 ಲಕ್ಷ ರೂ. ನೀಡಿದ್ದೇನೆ. ಮುಂದಿನ ದಿನಗಳಲ್ಲಿ ದೇವಸ್ಥಾನ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ. ಎಲ್ಲರೂ ಸಮುದಾಯದ ಏಳಿಗೆಗಾಗಿ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬರಬೇಕು. | ರಾಜೇಂದ್ರ ಪಾಟೀಲ, ಕೆಪಿಸಿಸಿ ಸದಸ್ಯ, ರಡ್ಡಿ ಸಮುದಾಯದ ಮುಖಂಡ