

ಮೂಡಲಗಿ, ಬೆಳಗಾವಿ: ಹಲವು ತುಮುಲಗಳಿಗೆ ಒಳಗಾಗಿ ಮನಃಶಾಂತಿ ಕಳೆದುಕೊಂಡಿರುವ ಮನುಷ್ಯ ಆಧ್ಯಾತ್ಮಿಕ ಚಿಂತನೆಯೆಡೆಗೆ ವಾಲುತ್ತಿದ್ದಾನೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವತ್ತ ಉಪಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.
ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ 146 ನೇ ಮಾಸಿಕ ತತ್ತ್ವ ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಸತ್ಸಂಗದಿಂದ ಬದುಕಿನಲ್ಲಿ ಬದಲಾವಣೆ ಧನಾತ್ಮಕ ಕಾಣಬಹುದು. ಇರುವುದರಲ್ಲಿಯೇ ತೃಪ್ತಿಪಟ್ಟುಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು. ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ ಆದರ್ಶ ಹಾಗೂ ಮಹಾಯೋಗಿ ವೇಮನರ ತತ್ವ ಸಂದೇಶಗಳು ಮಾನವಕುಲಕ್ಕೆ ಪ್ರಸ್ತುತವಾಗಿವೆ ಎಂದರು.
ನಿವೃತ್ತ ಕಾರ್ಯನಿರ್ವಾಹಕ ಅಭಿಯಂತ ರಮೇಶ ಜಂಗಲ್ ಮಾತನಾಡಿ, ಮಹಾಯೋಗಿ ವೇಮನರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹುಲಕುಂದ ರಾಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ಎಚ್.ಮುಂಬರಡ್ಡಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ರೆಡ್ಡಿ ಸಮುದಾಯಕ್ಕಷ್ಟೇ ಸೇರಿದವರಲ್ಲ. ಮಾನವ ಕುಲಕ್ಕೆ ಸೇರಿದವರು ಎಂದರು.
ಅಭಿಯಂತ ಎಚ್.ಆರ್.ಮಹಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಹಿರೇಮಠ ಶ್ರೀಗಳು ಆಶೀರ್ವಚನ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಮನಪ್ಪ ಮಾದರ ಹಾಗೂ ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದವರನ್ನು ಸನ್ಮಾನಿಸಲಾಯಿತು.
ಹೇಮ- ವೇಮನ ಸದ್ಬೋಧನ ಪೀಠದ ಮಾಲತೇಶ ಅಮಾತೆಪ್ಪನವರ, ರಾಮಣ್ಣ ಮಹಾರೆಡ್ಡಿ, ವೆಂಕಟೇಶ ವಹಾರೆಡ್ಡಿ, ರಮೇಶ ಅಣ್ಣಿಗೇರಿ, ಆರ್.ಎಸ್.ಪಾಟೀಲ ಇದ್ದರು.