

ಶ್ರೀರಂಗಪಟ್ಟಣ: ಆಧುನಿಕತೆ ಹಾಗೂ ಬದಲಾದ ನಾಗರಿಕತೆಯಲ್ಲಿ ಗ್ರಾಮಗಳು ಸಹ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಉಪನ್ಯಾಸಕ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಭಾನುವಾರ ಸ್ವಗ್ರಾಮ ಫೆಲೋಶಿಪ್ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಚಟುವಟಿಕೆ, ಜಾನುವಾರು ಸಾಕಣೆ ಸೇರಿದಂತೆ ಹಲವು ರೀತಿಯಲ್ಲಿ ಪ್ರಕೃತಿಯೊಂದಿಗೆ ಒಡನಾಟ ಹೊಂದುವ ಮೂಲಕ ಆರೋಗ್ಯಯುತ ಜೀವನ ನಡೆಸುತ್ತಿದ್ದ ಗ್ರಾಮೀಣ ಜನರು ಇಂದು ಆಧುನಿಕತೆಯ ಹೆಸರಿನಲ್ಲಿ ಬದಲಾಗಿ, ಕೃಷಿ ಚಟುವಟಿಕೆಗಳಿಂದ ದೂರ ಉಳಿದು, ಜಮೀನುಗಳನ್ನು ಲೇಔಟ್‌ಗಳಾಗಿ ಪರಿವರ್ತಿಸಿ, ಗ್ರಾಮಗಳ ಸ್ವರೂಪವನ್ನು ನಗರೀಕರಣಕ್ಕೆ ಮಾರ್ಪಡಿಸುತ್ತಿರುವುದು ಬೇಸರದ ಸಂಗತಿ. ಹಳ್ಳಿಗಳಿಂದ ಉತ್ತಮ ಗಾಳಿ, ಪರಿಸರ, ಸತ್ವಯುತ ಆಹಾರದಿಂದ ಆರೋಗ್ಯವಂತರಾಗಿದ್ದ ಗ್ರಾಮೀಣ ಜನರಲ್ಲೂ ಇಂದು ರಕ್ತದೊತ್ತಡ, ಮಧುಮೇಹ ಸಾಮಾನ್ಯವಾಗತೊಡಗಿದೆ. ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಹಳ್ಳಿಗಳು ತಮ್ಮ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಪರಿಸರ ಪ್ರೇಮಿ ರಮೇಶ್ ಮಾತನಾಡಿ, ಮಾನವ ಏನನ್ನು ಕೇಳದೆ ಎಲ್ಲ ಸಂಪತ್ತನ್ನು ನೀಡಿರುವ ಪ್ರಕೃತಿಯ ಋಣ ತೀರಿಸಲು ನಾವು ಮುಂದಿನ ಪೀಳಿಗೆ ಸೇರಿದಂತೆ ಸಕಲ ಜೀವರಾಶಿಗಳ ಉಳಿವಿಗಾಗಿ ಗಿಡನೆಟ್ಟು ನೀರುಣಿಸಿ ಅವುಗಳ ಪೋಷಣೆ ಮಾಡಬೇಕು ಎನ್ನುವ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಕೆ.ಜೆ.ಲೋಕೇಶ್, ಕೆ.ಸಿ.ಮಹದೇವು, ಪ್ರಾಣೇಶ್, ಆದರ್ಶ, ಕೃಷ್ಣಪ್ಪಗೌಡ, ಅಣ್ಣಯ್ಯಪ್ಪ, ಯೋಗೇಶ್, ನಾಗರಾಜು, ಸ್ವಗ್ರಾಮ ಫೆಲೋಶಿಪ್ ಮಾರ್ಗದರ್ಶಕ ಮಹೇಶ್, ಹಿತಚಿಂತಕ ಕೂಡಲಕುಪ್ಪೆ ಸೋಮಶೇಖರ್, ಅರ್ಜುನ್, ಅವಿನಾಶ್, ಪ್ರಕಾಶ್, ಮಂಜು ಇತರರಿದ್ದರು.