ಆಧುನಿಕತೆ ಭರಾಟೆಯಲ್ಲಿ ಜಾನಪದ ವಿನಾಶದತ್ತ ಮುಖ: ಪ್ರೊ.ನಂಜಯ್ಯ ಹೊಂಗನೂರು

2
Published on

ಮೈಸೂರು: ಮೂಲ ಕಲೆಯಾದ ಜಾನಪದ ಕಲಾವಿದರಿಗೆ ಮನ್ನಣೆ ಹಾಗೂ ಉತ್ತೇಜನ ನೀಡುವ ಕೆಲಸ ಆಗಬೇಕು ಎಂದು ಮೈಸೂರು ವಿವಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ನಂಜಯ್ಯ ಹೊಂಗನೂರು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ಹಳೇ ಬೇರು ಹೊಸ ಚಿಗುರು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕತೆಯ ಭರಾಟೆಯಲ್ಲಿ ಜಾನಪದ ಪರಂಪರೆ ವಿನಾಶದ ಅಂಚಿನತ್ತ ಮುಖ ಮಾಡಿದೆ. ಆದ್ದರಿಂದ ಈ ಕಲೆ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸಿ ಇದನ್ನು ಉಳಿಸಿ ಬೆಳೆಸುವ ಕಾಯಕವಾಗಬೇಕಾಗಿದೆ. ಜತೆಗೆ, ಇದಕ್ಕೆ ಸರ್ಕಾರವೂ ಕೈಜೋಡಿಸುವ ಮೂಲಕ ಜಾನಪದ ಕಲೆಗೆ ಸಂಬಂಧಿಸಿದಂತೆ ಕಾರ್ಯಕ್ರಮ, ತರಬೇತಿ ಶಿಬಿರ ಆಯೋಜನೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಜಾನಪದ ಕಲೆ ಮಾನವೀಯ ಮೌಲ್ಯ ಬೆಳೆಸಲು ಸಹಕಾರಿಯಾಗಿದೆ. ಆದ್ದರಿಂದ ಈ ಕಲೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಜಾನಪದದಲ್ಲಿ ಕಂಸಾಳೆ, ಸೋಬಾನೆ ಪದ, ಜೋಗತಿ ನೃತ್ಯ, ಜೋಗುಳ, ಲಾವಣಿ ಹೀಗೆ ಸಾಕಷ್ಟು ಪ್ರಕಾರಗಳಿವೆ. ಆದರೆ, ಪಾಶ್ಚಿಮಾತ್ಯ ಹಾಗೂ ಆಧುನಿಕತೆ ಅಬ್ಬರದ ನಡುವೆ ಜಾನಪದ ಕಲೆ ಕಳೆಗುಂದಿದೆ. ಜಾನಪದ ಕಲೆ ನಾಡಿನ ಮೂಲ ಬೇರು. ಇದನ್ನು ಪುನಃ ಕಟ್ಟುವ, ಸಂರಕ್ಷಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಡಾ.ಬಿ.ಮಂಜಮ್ಮ ಜೋಗತಿ, ಸಂಸಕ್ಕತಿ ಚಿಂತಕ ಪಾರಾ ಕೃಷ್ಣಮೂರ್ತಿ, ಅಕಾಡೆಮಿ ಸದಸ್ಯ ಜಿ.ಆರ್.ಶ್ರೀವತ್ಸ, ರಿಜಿಸ್ಟ್ರಾರ್ ಎನ್.ನಮ್ರತಾ, ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ, ಡಾ.ಮೈಸೂರು ಗುರುರಾಜ್, ರಂಗಕರ್ಮಿ ರಾಮಚಂದ್ರ, ಕಂಸಾಳೆ ಕುಮಾರಸ್ವಾಮಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net