ಆಧುನಿಕತೆ ಭರಾಟೆಯಲ್ಲಿ ಜಾನಪದ ಕಲಾವಿದರ ಬದುಕು ಅತಂತ್ರ

CTD JANAPADA----
Published on

ಚಿತ್ರದುರ್ಗ: ಹಬ್ಬ-ಹರಿದಿನ ಮತ್ತಿತರ ಸಂಭ್ರಮಚಾರಣೆಗಳಲ್ಲಿ ಡಿಜೆ ಬಳಕೆ ನಿಯಂತ್ರಿಸಿ, ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಪರಂಪರೆ ಪ್ರಜ್ಞೆಯ ಸಂಕೇತವಾಗಿರುವ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಬೇಕಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ನಗರದ ಪತ್ರಿಕಾಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ವಿಶ್ವ ಜಾನಪದ ದಿನಾಚರಣೆ ಮತ್ತು ಚಿತ್ರದುರ್ಗ, ವಿಜಯನಗರ ಜಿಲ್ಲೆಗಳ ಅಂತರ ಜಿಲ್ಲಾ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆ ಭರಾಟೆಯಲ್ಲಿ ಕಲೆ ಮತ್ತು ಕಲಾವಿದರ ಬದುಕು ಆತಂತ್ರವಾಗಿವೆ. ಅರಿವಿನ ಸಂಪತ್ತು, ಪೂರ್ವಿಕರ ಅನುಭವಜನ್ಯ ಜಾನಪದ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ಹೆಚ್ಚು ಪ್ರದರ್ಶನಗೊಳಿಸುವುದರ ಮೂಲಕ ಅವುಗಳನ್ನು ಉಳಿಸಿ-ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಡಾ.ಜೆ. ಕರಿಯಪ್ಪ ಮಾಳಿಗೆ, ಸಮಾನತೆ, ಸೌಹಾರ್ದ, ಸಾಮರಸ್ಯ ಬಿಂಬಿಸುವ ಪಾರಂಪರಿಕ ಕಲೆಗಳು ಮುಖಾಮುಖಿಯಾಗಬೇಕು. ಕೂಡು ಸಂಸ್ಕೃತಿ ಮೌಲ್ಯ ಬಿಂಬಿಸುವ ಜಾನಪದ ಪರಂಪರೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆ ಮೂಲಕ ಕಲಾವಿದರ ಬದುಕು ಗಟ್ಟಿಗೊಳಿಸುವ ಚಿಂತನೆ ನಡೆಯಬೇಕು ಎಂದರು.

ಜಾನಪದ ಸಂಸ್ಕೃತಿ ಮತ್ತು ಆಧುನಿಕತೆ ಕುರಿತು ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಜಾಗತೀಕರಣದ ದಿನಮಾನಗಳಲ್ಲಿ ಜಾನಪದ ಸಾಹಿತ್ಯ-ಕಲೆ ನಶಿಸುತ್ತಿದೆ. ಇವುಗಳನ್ನು ಉಳಿಸಿಕೊಂಡು, ನವ ಪೀಳಿಗೆಗೆ ಸಂಸ್ಕಾರ ಕಲಿಸುವ ತುರ್ತು ಅಗತ್ಯವಿಂದು ನಮ್ಮ ಮುಂದಿದೆ ಎಂದರು.

ಏಕತೆ, ಸಮಗ್ರತೆ, ಸೌಹಾರ್ದಕ್ಕೆ ನೆರವಾಗುವ ಜಾನಪದದಿಂದ ಶಾಂತಿ-ನೆಮ್ಮದಿ ಕಾಣಬಹುದು. ಜನಪದ ಕಲೆಗಳಿಗೆ ಜಾತಿ, ಮತ,ಪಂಥಗಳಿಲ್ಲ. ನೆಲಮೂಲ ಸಂಸ್ಕೃತಿಯ ಬೇರುಗಳಾಗಿರುವ ಜನಪದ ಕಲೆಗಳನ್ನು ಕಾಪಾಡುವ ಹೊಣೆ ಯುವಜನರ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾಧ್ಯಕ್ಷ ನಿರಂಜನ ದೇವರಮನೆ ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಕಲೆ ಮಾನವ ಜೀವಿಗೆ ಸಂಸ್ಕಾರ, ಸದ್ಗುಣ, ಸಚ್ಚಾರಿತ್ರೃದ ಶಕ್ತಿ ತುಂಬುತ್ತದೆ. ಜಾನಪದ ಸಾಹಿತ್ಯ, ಕಲೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ದಿನೇಶ್‌ಗೌಡಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಆಹೋಬಲಪತಿ, ಪರಿಷತ್ ವಿಜಯನಗರ ಜಿಲ್ಲಾಧ್ಯಕ್ಷ ಕೆ.ಸಿ.ಪರಶುರಾಮ ಹಂಗೂರ್, ಡಾ.ಎನ್.ಎಸ್. ಮಹಾಂತೇಶ, ಕೆ.ಸಿ. ರುದ್ರೇಶ್ ಇತರರು ಇದ್ದರು. ಗೊರವರ ಕುಣಿತ, ವೀರಗಾಸೆ, ಚೌಡಿಕೆ ಮೇಳ, ಕಹಳೆ ವಾದ್ಯ, ಉರುಮೆ, ತಮಟೆ, ತಂಬೂರಿ ವಾದ್ಯ ಹಾಗೂ ಗಾಯನವನ್ನು ಕಲಾವಿದರು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net