ಆಧುನಿಕ ಸಮಾಜಕ್ಕೆ ಮಾರ್ಗದರ್ಶನ ಅಗತ್ಯ, ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ, ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ

14 Nela Ph 02 NotBook (1)
Published on

ನೆಲಮಂಗಲ: ಆಧುನಿಕತೆಯ ಸಮಾಜಕ್ಕೆ ಗುರು-ಹಿರಿಯರ ಅನುಭವ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಪ್ರತಿ ಸಮುದಾಯದಲ್ಲಿ ಬಡ ವಿದ್ಯಾರ್ಥಿಗಳಿದ್ದಾರೆ. ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘಟನೆಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ನಿವೃತ್ತಿ ನಂತರವೂ ಸಂಘಟಿತರಾಗಿ ದತ್ತಿ ಸಮಿತಿ ರಚಿಸಿಕೊಂಡು ಸಮಾಜದ ಬಡಮಕ್ಕಳ ನೆರವಿಗೆ ಮುಂದಾಗಿರುವ ನಿವೃತ್ತ ನೌಕರರ ಸಂಘದ ಕಾರ್ಯ ಶ್ಲಾಘನೀಯ. ಇತರೆ ಸಂಘಟನೆಗಳಿಗೆ ಆದರ್ಶವಾಗುವ ಜತೆಗೆ ಸಂಘದ ಸದಸ್ಯರ ಕ್ರಿಯಾಶೀಲತೆಗೆ ಸಹಕಾರಿಯಾಗಲಿದೆೆ. ಸಮುದಾಯದ ವಿದ್ಯಾರ್ಥಿಗಳಿಗೆ ನಾಡಿನಲ್ಲಿರುವ ಮಠಗಳ ಇತಿಹಾಸ ಹಾಗೂ ಸಮುದಾಯದ ಸಂಸ್ಕೃತಿಯನ್ನು ಪರಿಚಯಿಸಿ ಕೊಡಬೇಕಿದೆ ಎಂದರು.

ಬಿಬಿಎಂಬಿ ಮಾಜಿ ಮೇಯರ್ ಗಂಗಾಬಿಕೆ ಮಾತನಾಡಿ, ಸಮಾಜದಲ್ಲಿರುವ ಹಿರಿಯರು, ವಯೋವೃದ್ಧರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಆರ್. ನಾಗರಾಜು ಮಾತನಾಡಿ, ಸಮಾಜದ ನಿವೃತ್ತ ನೌಕರರನ್ನು ಒಗ್ಗೂಡಿಸಿ ಅವರ ಯೋಗಕ್ಷೇಮದ ಜತೆಗೆ ಸಮಾಜದಲ್ಲಿ ಸಕ್ರಿಯಗೊಳಿಸಲು ಸಂಘವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸದಸ್ಯರಿಗೆ ಆರೋಗ್ಯ ಶಿಬಿರ, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ದತ್ತಿ ಸಮಿತಿಯ ಆದಾಯದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಮೃತ ಸದಸ್ಯರ ಕುಟುಂಬಗಳಿಗೆ ಸಾಂತ್ವನ: ವಿವಿಧ ಕಾರಣಗಳಿಂದ ಮೃತಪಟ್ಟ ಸಂಘದ ಸದಸ್ಯರ ಆತ್ಮಶಾಂತಿಗಾಗಿ ಪಾರ್ಥಿಸಲಾಯಿತು. ಬಳಿಕ ಮೃತರ ಕುಟುಂಬದವರನ್ನು ಗೌರವಿಸಿ, ಸಾಂತ್ವನ ಹೇಳಲಾಯಿತು. ವೀರಶೈವ ಲಿಂಗಾಯತ ವಧುವರರ ಅನ್ವೇಷಣಾ ಕೇಂದ್ರ ಉದ್ಘಾಟಿಸಲಾಯಿತು. ಅದರ ಮುಖ್ಯಸ್ಥರಾಗಿ ಹೇಮಪುರ ಚಂದ್ರಶೇಖರ್ ಆಯ್ಕೆಯಾದರು.

ನಗರಸಭೆ ನೂತನ ಸದಸ್ಯರಾಗಿ ಅಕಾರ ಸ್ವೀಕರಿಸಿದ ಸಮುದಾಯದ ಸಿ. ಪ್ರದೀಪ್‌ಕುಮಾರ್, ಎನ್.ಎಸ್. ಪೂರ್ಣಿಮಾ ಸುಗ್ಗರಾಜು, ಲೋಲಾಕ್ಷಿ ಗಂಗಾಧರ್, ನಾಮನಿರ್ದೇಶಿತ ಸದಸ್ಯೆ ರಾಜಮ್ಮ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು. ಅಧ್ಯಕ್ಷರಾಗಿ ಸರೋಜಮ್ಮ ಅವರು ಆಯ್ಕೆಯಾದರು.

ವೀರಶೈವ ಲಿಂಗಾಯತ ಸಮುದಾಯದ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಎನ್.ಎಚ್. ಜಯದೇವಯ್ಯ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಮೇಶ್ ಜಿ. ಅದರಂಗಿ, ಪಿಯು ನಿವೃತ್ತ ಉಪನಿರ್ದೇಶಕ ಎಂ.ವಿ. ನೆಗಳೂರು, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ರುದ್ರೇಶಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಷಣ್ಮುಖಪ್ಪ, ಕೃಷ್ಣಮೂರ್ತಿ, ಖಜಾಂಚಿ ನಾಗರಾಜಯ್ಯ, ದತ್ತಿ ಸಮಿತಿ ಕಾರ್ಯದರ್ಶಿ ಸೋಮಶೇಖರಯ್ಯ, ನಿವೃತ್ತ ತಹಸೀಲ್ದಾರ್ ಬಸವರಾಜು, ಸಾಹಿತಿ ಎಸ್. ರೇಣುಕಾರಾಧ್ಯ, ಮುಖಂಡರಾದ ಮಲ್ಲೇಶಯ್ಯ, ಜಯಣ್ಣ, ಶೇಖರಪ್ಪ, ಗಂಗಣ್ಣ, ಶಿಕ್ಷಕರಾದ ಅಭಿಲಾಷ್, ಜ್ಞಾನೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net