ಆಧುನಿಕ ಶಿಕ್ಷಣ ಶೈಲಿ ಮಾಧ್ಯಮಗಳಿಂದ ಪಾಶ್ಚಿಮಾತ್ಯ ಪ್ರಭಾವ ಹೆಚ್ಚು

19NGD13
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾ ಮೇಳ ಹಾಗೂ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮವನ್ನು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಸಿದರು. ಸುತ್ತೂರು ಶ್ರೀ, ಸಚಿವ ಮಾಧುಸ್ವಾಮಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಇತರರಿದ್ದರು.
Published on

ನಂಜನಗೂಡು: ಆಧುನಿಕ ಶಿಕ್ಷಣ ಶೈಲಿ ಹಾಗೂ ಮಾಧ್ಯಮಗಳಿಂದ ಪಾಶ್ಚಿಮಾತ್ಯ ಪ್ರಭಾವ ಹೆಚ್ಚಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಮ್ಮ ಸನಾತನ ಹಿಂದು ಧರ್ಮದ ಜ್ಞಾನ ಸಂಪತ್ತು ಮತ್ತು ನಮ್ಮತನದ ಅರಿವು ಮೂಡಿಸುವ ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಅದ್ಭುತ ಕಾಲ ಬಂದಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಗುರುವಾರ ರಾಜ್ಯಮಟ್ಟದ ಭಜನಾ ಮೇಳ ಹಾಗೂ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮತನದ ಅರಿವು ನಮ್ಮಲ್ಲಿ ಕಡಿಮೆಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಪ್ರಭಾವಿತರಾಗುತ್ತಿರುವ ಹೊಸ್ತಿಲಿನಲ್ಲಿ ಹಿಂದು ಧರ್ಮದ ಜ್ಞಾನ ಸಂಪತ್ತಿನ ಫಲವನ್ನು ನಾವು ಅನುಭವಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಸನಾತನ ಧರ್ಮ ಮರುಸ್ಥಾಪನೆ ಆಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾಶಿ, ಉಜ್ಜಯಿನಿ, ಅಯೋಧ್ಯಾದಂತಹ ಹಿಂದು ಧರ್ಮದ ಪುಣ್ಯಕ್ಷೇತ್ರಗಳು ಪುನರುಜ್ಜೀವನಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ನಮ್ಮ ಪರಂಪರೆ ಮರು ಸ್ಥಾಪನೆಯಾಗುತ್ತಿರುವುದರಲ್ಲಿ ಸಂಶಯವೇ ಇಲ್ಲ ಎಂದರು.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಕತ್ತಿ, ಚೂರಿಯಿಂದ ವಿದೇಶಿ ಶಕ್ತಿಗಳು ಮತಾಂತರ ಮಾಡಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಆದರೂ ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ಸನಾತನ ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಮಠ ಮಾನ್ಯಗಳ ಪಾತ್ರ ಹಿರಿದಾಗಿದೆ. ಸಮೃದ್ಧ ಕಾಲಘಟ್ಟದಲ್ಲೂ ನಾವು ಅನೇಕ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಭೀಕರ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ನಮ್ಮ ಪೂರ್ವಜರನ್ನು ನಾವು ಸ್ಮರಿಸಲೇಬೇಕಿದೆ ಎಂದು ಹೇಳಿದರು.

ಜಡತ್ವ, ನಿಷ್ಕ್ರಿಯತೆಯಿಂದ ಹೊರಬರಲು ನಮ್ಮ ಪೂರ್ವಿಕರು ಜಾತ್ರೆ, ಉತ್ಸವದಂತಹ ಜನಸಂಸ್ಕೃತಿ ಪರಂಪರೆಯ ಬೀಜವನ್ನು ಬಿತ್ತಿ ಹೋಗಿದ್ದಾರೆ. ಹೊಸತನ ನಿರ್ಮಾಣ ಆಗದೇ ಹೋದರೆ ಅನೇಕ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಭೋಗಕ್ಕಾಗಿ ಹುಟ್ಟಿದ್ದೇವೆ ಎಂಬ ಭಾವ ಬಿಟ್ಟು ಸೃಷ್ಟಿಯ ಮೂಲ ಶಕ್ತಿಯನ್ನು ನಾವು ಅರಿತುಕೊಳ್ಳಬೇಕಿದೆ. ಭಕ್ತಿಮಾರ್ಗದಲ್ಲಿ ಬಹಳ ದೊಡ್ಡ ಪರಂಪರೆಯನ್ನು ಪುರಂದರದಾಸರು, ಕನಕದಾಸರಂತಹ ಮಹನೀಯರ ಹೆಜ್ಜೆ ಗುರುತುಗಳಿವೆ. ಜ್ಞಾನ ಮಾರ್ಗದಲ್ಲಿ ಸಾಗುವ ಮೂಲಕ ನೈತಿಕ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ಆಶಿಸಿದರು.


ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಧರ್ಮ, ಕರ್ಮ ವ್ಯತ್ಯಾಸವಿಲ್ಲದೆ ಇರುವುದೇ ವೀರಶೈವ ಧರ್ಮದ ವಿಶೇಷ. ಕಾಯಕದಲ್ಲಿ ಧರ್ಮವನ್ನು ಕಾಣಬೇಕು. ನಡೆ ನುಡಿ ಆಚರಣೆ ಮೂಲಕ ನಾವು ಶ್ರೇಷ್ಠತ್ವದೆಡೆಗೆ ಸಾಗಬೇಕು. ಮನುಷ್ಯ ಸ್ವಾಭಿಮಾನದಿಂದ ಬದುಕಬೇಕು. ಮತ್ತೊಬ್ಬರಿಗೆ ಕೇಡು ಬಯಸದೆ ಇರುವುದೇ ನಿಜವಾದ ಧರ್ಮಪಾಲನೆ ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಳಗಾವಿಯ ಡಾ.ಅಲ್ಲಮಪ್ರಭು ಸ್ವಾಮೀಜಿ, ದೇವನೂರಿನ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಶಾಸಕ ಅರವಿಂದ ಬೆಲ್ಲದ, ಯುಎಸ್‌ಎ ಗ್ಲೋಬಲ್ ಹಿಂದು ಹೆರಿಟೇಜ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಕಾಶ್‌ರಾವ್ ವಿ.ವೆಲಗಪುಡಿ, ಕೇಂದ್ರ ಜಿಎಸ್‌ಟಿ ಅಧಿಕಾರಿ ಕೆ.ಸಿ.ಜಾನಿ ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net