ಆಧುನಿಕ ಕಾಲದಲ್ಲಿ ವ್ಯಾಪಾರೀಕರಣವಾಗುತ್ತಿರುವ ಶಿಕ್ಷಣ

4
Published on

ಮೈಸೂರು: ಆಧುನಿಕ ಕಾಲದಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.

ಬೋಗಾದಿ 2ನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಭಾನುವಾರ ಆಯೋಜಿಸಿದ್ದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಪಾಶ್ಚಾತ್ಯ ಪ್ರಭಾವಕ್ಕೊಳಗಾಗಿ ವ್ಯಾಪಾರೀಕರಣಗೊಳ್ಳುತ್ತಿರುವ ಇಂದಿನ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಧ್ಯೇಯಗಳು, ಸೇವಾ ಮನೋಭಾವ, ರಾಷ್ಟ್ರೀಯ ಹಿತಾಸಕ್ತಿ ಬೆಳೆಸುವುದು ಮುಖ್ಯ. ಶಿಕ್ಷಣ ಕೇವಲ ಪಠ್ಯಕ್ಕೆ ಸೀಮಿತವಾಗದೆ ನಮ್ಮೊಳಗಿನ ಅರಿವಿನ ಕಣ್ಣನ್ನು ತೆರೆಸುವ ಜ್ಞಾನ ನೀಡಬೇಕು. ಇಂಥ ಶಿಕ್ಷಣವನ್ನು ಪಡೆದುಕೊಂಡು ಸಮಾಜಮುಖಿ, ರಾಷ್ಟ್ರಮುಖಿ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ದೇಶ ಮೊದಲು ಎನ್ನುವ ಭಾವನೆ, ನಂಬಿಕೆ ಇದ್ದರೆ ಜಗತ್ತಿಗೆ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ತಂದು ನಿಲ್ಲಿಸಬಹುದು. ದ್ವೇಷ, ಜಾತಿ-ಉಪಜಾತಿ ಕಂದಕಗಳನ್ನು ತೋಡಿಕೊಂಡು ರಾಜಕೀಯ ಸೇರಿ ವಿವಿಧ ಕಾರಣಕ್ಕಾಗಿ ಪೋಷಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಭಾರತದ ಐಕ್ಯತೆ, ಅಖಂಡತೆಗಾಗಿ ನಾವು ದೇಶ ಮೊದಲು ಎನ್ನುವುದು ಬರಬೇಕು. ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಮುಂದಿನ ವರ್ಷಕ್ಕೆ ಮೊದಲ ಸ್ಥಾನಕ್ಕೇರಲಿದೆ. ಅದೇ ರೀತಿ ಭಾರತವು ವಿಶ್ವಗುರು ಆಗಬೇಕಿದೆ ಎಂದರು.

ಪದವಿಯ ಮುಂದಿನ ಜೀವನದ ಹಾದಿ ಅತ್ಯಂತ ಕಠಿಣ ಹಾದಿ ಆಗಿದೆ. ಹೆಚ್ಚಿನ ಶ್ರಮ ಬೇಡುತ್ತದೆ. ಆ ಹಾದಿಯಲ್ಲಿ ಮುಂದುವರಿಯಲು ನಮಗೆ ಪ್ರಬಲ ಇಚ್ಛಾಶಕ್ತಿ ಇರಬೇಕು. ಆ ಇಚ್ಛಾಶಕ್ತಿ ಬರುವುದು ಆಧ್ಯಾತ್ಮಿಕ ಜ್ಞಾನದಿಂದ. ಪದವಿ ಜತೆಗೆ ಆಧ್ಯಾತ್ಮಿಕ ತಳಹದಿಗೆ ಒಂದು ಭದ್ರ ಬುನಾದಿ ನೀಡುವ ಸಂಸ್ಕಾರಯುತ ಶಿಕ್ಷಣ ನಮ್ಮದಾಗಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ರಾಷ್ಟ್ರದ ಜವಾಬ್ದಾರಿಯುತ ಪ್ರಜೆಗಳಾಗಲು ನಮ್ಮ ದೇಶದ ಅತ್ಯುನ್ನತ ಗ್ರಂಥವಾದ ಭಾರತ ಸಂವಿಧಾನವನ್ನು ಅಧ್ಯಯನ ಮಾಡುವುದೂ ಅಷ್ಟೇ ಅಗತ್ಯ ಎಂದು ಯುವ ಜನರಿಗೆ ಕಿವಿಮಾತು ಹೇಳಿದರು.
ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪೂರ್ಣಾಮೃತಾನಂದ ಪುರಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬೇಕು. ಪ್ರತಿಯೊಬ್ಬ ಹಿರಿಯರನ್ನು ತನ್ನ ತಂದೆ-ತಾಯಿಯೆಂದು ತಿಳಿದು ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.


ಒಬ್ಬ ವ್ಯಕ್ತಿ ಎಷ್ಟೇ ಜ್ಞಾನವನ್ನು ಆರ್ಜಿಸಿದರೂ ಅದು ಕಡಿಮೆಯೇ. ಇನ್ನೂ ಹೆಚ್ಚಿನ ಅರಿವನ್ನು ಪಡೆಯುವ ಹಂಬಲ ನಮ್ಮಲ್ಲಿರಬೇಕು. ಆ ಜ್ಞಾನ ನಮ್ಮ ಅಹಂಕಾರವನ್ನು ಕಡಿಮೆ ಮಾಡುತ್ತ ಹೋಗಬೇಕು. ಈ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಅತ್ಯುನ್ನತ ಆಲೋಚನೆಗಳಿರಬೇಕು. ಅದರಿಂದ ವಿಶ್ವತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.


ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಸಮಾಜದ ಆಸ್ತಿಯಾಗಿದ್ದಾರೆ. ದೇಶ-ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಪದವಿ ಹಾಗೂ ಸ್ನಾತಕೋತ್ತರ ಪದವಿಯ 531 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 57 ವಿದ್ಯಾರ್ಥಿಗಳು ರ‌್ಯಾಂಕ್ ಹಾಗೂ ಪದಕ ಸ್ವೀಕರಿಸಿದರು.


ಅಮೃತ ವಿಶ್ವವಿದ್ಯಾಪೀಠಂನ ಕುಲಸಚಿವ ಡಾ.ಕೆ.ಶಂಕರನ್, ಪರೀಕ್ಷಾ ನಿಯಂತ್ರಕ ಡಾ.ಆರ್.ದಂಡಪಾಣಿ, ಐಕ್ಯೂಎಸಿ ಉಪಾಧ್ಯಕ್ಷ ಡಾ.ಪ್ರಶಾಂತ್ ನಾಯರ್, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿದಾಮ್ರತ ಚೈತನ್ಯ, ಪ್ರಾಂಶುಪಾಲ ಡಾ. ಜಿ.ರವೀಂದ್ರನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net