ಆಧಾರ್ ಹೊಂದಿರುವ  ದೇಶದ ಶೇ.95ರಷ್ಟು ಜನರು

mysore
Published on

ಮೈಸೂರು: ದೇಶದಲ್ಲಿ ಶೇ.95ರಷ್ಟು ಜನ ಆಧಾರ್ ಕಾರ್ಡ್ ಹೊಂದಿದ್ದಾರೆ. ಇದುವೇ ದೊಡ್ಡ ಸಾಧನೆ ಎಂದು ಆಧಾರ್ ಸಂಸ್ಥಾಪಕ ಸಿಟಿಒ ಶ್ರೀಕಾಂತ್ ನಾದಮುನಿ ತಿಳಿಸಿದರು.

ಎನ್‌ಐಇ ಕಾಲೇಜು, ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಸಂಸ್ಥೆ ಸಹಯೋಗದಲ್ಲಿ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಇಲ್ಯುಮಿನೇಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧಾರ್ ದತ್ತಾಂಶ ಸುರಕ್ಷತೆವಾಗಿದ್ದು, ಇದರ ಕುರಿತು ಸಾರ್ವಜನಿಕರು ತಲೆ ಕೆಡಿಸಿಕೊಳ್ಳಬೇಡಿ. ದತ್ತಾಂಶ ಭದ್ರತೆಯನ್ನು ಹೊಂದಿದ ವಿಶ್ವದ ಅತಿದೊಡ್ಡ ಗುರುತಿನ ವ್ಯವಸ್ಥೆ ಎಂಬ ಕೀರ್ತಿಗೆ ಆಧಾರ್ ಭಾಜನವಾಗಿದೆ. ಈ ವ್ಯವಸ್ಥೆಯಲ್ಲಿ ದತ್ತಾಂಶ ಕಳ್ಳತನ ಅಷ್ಟು ಸರಳ, ಸುಲಭವೂ ಅಲ್ಲ. ವೈಯಕ್ತಿಕ ದತ್ತಾಂಶ ಸುರಕ್ಷಿತವಾಗಿರುವುದನ್ನು ಶೇ.90ರಷ್ಟು ಜನ ಸಮ್ಮತಿಸಿದ್ದಾರೆ ಎಂದರು.

ಡಿಜಿಟಲ್ ಸಾರ್ವಜನಿಕ ಸೌಲಭ್ಯವು ಇದೀಗ ದೇಶದಲ್ಲಿ ದೊಡ್ಡ ಕಾಂತ್ರಿ ಉಂಟು ಮಾಡಿದೆ. ಸರ್ಕಾರ, ಖಾಸಗಿ ಹಾಗೂ ಸಾರ್ವಜನಿಕರು ಸೇರಿ ನಿರ್ಮಾಣ ಮಾಡಿದ ವ್ಯವಸ್ಥೆ ಇದಾಗಿದೆ. ಯುಪಿಐ, ಡಿಜಿ ಲಾಕರ್, ಜನಧನ್, ಪಿಂಚಣಿ ಯೋಜನೆ ಸೇರಿದಂತೆ ಎಲ್ಲ ಸೌಲಭ್ಯಗಳು ಜಾರಿಗೆ ಅನುಕೂಲವಾಗಿದೆ ಎಂದರು.

4 ಲಕ್ಷ ನೋಂದಣಿ ಕಿಟ್‌ಗಳನ್ನು ಬಳಸಿ ಆಧಾರ್ ವ್ಯವಸ್ಥೆಯನ್ನು ದೇಶಾದ್ಯಂತ ಅನುಷ್ಠಾನಕ್ಕೆ ತರಲಾಯಿತು. ನಿತ್ಯ 13 ಸಾವಿರ ಬಯೊಮೆಟ್ರಿಕ್ ದತ್ತಾಂಶ ಸಮೀಕರಣಗೊಳಿಸಿ ದೃಢೀಕರಣಗೊಳಿಸಲಾಯಿತು. ಮೈಸೂರಿನಲ್ಲಿ ಆರಂಭವಾದ ಕಾಗದ ರಹಿತ ಸೇವೆಯಿಂದ 8.5 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು.

ಡಿಜಿಟಲ್ ಕ್ರಾಂತಿಗೆ ಮೈಸೂರು ನಗರವೇ ಮೊದಲ ಭೂಮಿಕೆ ಬರೆದಿದ್ದು, ಪರೀಕ್ಷಾರ್ಥವಾಗಿ ಆರಂಭವಾದ ಆಧಾರ್ ಸೇವೆಗೆ ನಗರದಲ್ಲೇ ಉತ್ತಮ ಪ್ರತಿಕ್ರಿಯೆ ದೊರೆಯಿತು ಎಂದರು.

ನಗರದಲ್ಲಿ 15 ವರ್ಷದ ಹಿಂದೆ ನಡೆದ ಡಿಜಿಟಲ್ ಕ್ರಾಂತಿಗೆ ಸ್ಪಂದನೆ ಸಿಕ್ಕಿತ್ತು. ಹೀಗಾಗಿ, ಇಲ್ಲಿಯೇ ಪ್ರಾಯೋಗಿಕವಾಗಿ ಆಧಾರ್ ಸೇವಾ ಕಾರ್ಯ ಶುರು ಮಾಡಲಾಯಿತು. ಆಧಾರ್ ಕಾರ್ಡ್ ಪಡೆದುಕೊಳ್ಳಲು ಕೃಷಿಕರು, ಗ್ರಾಮೀಣ ಪ್ರದೇಶದ ಜನರು, ಅಸಂಘಟಿತ ವರ್ಗ, ಶ್ರಮಿಕರು ಸೇರಿದಂತೆ ಎಲ್ಲ ವರ್ಗದ ಜನರು ಆಸಕ್ತಿ ತೋರಿದರು ಎಂದು ಸ್ಮರಿಸಿದರು.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮತ್ತು ಆಧಾರ್ ಸಂಖ್ಯೆಯೊಂದಿಗೆ ದಶಕಗಳ ಹಿಂದೆ ಜೋಡಣೆ ಮಾಡಿದ್ದು, ನಂಜನಗೂಡು ಭಾಗದಲ್ಲೇ. ಇಲ್ಲಿ ಯಶಸ್ವಿಯಾದ ಬಳಿಕ ದೇಶಾದ್ಯಂತ ಈ ಸೇವೆಯನ್ನು ವಿಸ್ತರಿಸಲಾಯಿತು ಎಂದು ವಿವರಿಸಿದರು.

ಕರೊನಾ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ತಿಳಿದುಕೊಳ್ಳಲು ಟೆಲಿ ಐಸಿಯು ಯೋಜನೆಯನ್ನು ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಅನುಷ್ಠಾನಕ್ಕೆ ತರಲಾಯಿತು. ಕೇರ್ ಪ್ಲಾಟ್‌ಫಾರ್ಮ್ ಮೂಲಕ ದೇಶಾದ್ಯಂತ ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಸಿಗುವಂತೆ ಮಾಡಲಾಯಿತು. ಈ ರೀತಿಯ ಸೌಲಭ್ಯ ದೊರೆಯಲು ಆಧಾರ್ ಕಾರಣವಾಯಿತು ಎಂದರು. ಬಜ್ ಆನ್ ಅರ್ಥ್ ಸಂಸ್ಥಾಪಕ ಸಿಇಒ ಗಾಯತ್ರಿ ಚೌಹಾಣ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net