ಆಧಾರ್ ತಿದ್ದುಪಡಿಗೆ ಸುಸ್ತಾದ ಜನತೆ

ADHAR
Published on

ಕೊಪ್ಪಳ: ಗ್ಯಾರಂಟಿ ಭಾಗ್ಯಗಳ ಲಾಭ ಪಡೆಯಲು ಜನರು ಉತ್ಸುಕರಾಗಿದ್ದು, ಆಧಾರ್ ವಿವರ ಬದಲಾವಣೆಗಾಗಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಹಗಲು-ರಾತ್ರಿ ಸರತಿ ನಿಲ್ಲುತ್ತಿದ್ದು, ಮಕ್ಕಳು ಹಾಗೂ ಕಲ್ಲು ಮುಂತಾದ ವಸ್ತುಗಳನ್ನು ಪಾಳೆಯಲ್ಲಿಡುತ್ತಿದ್ದಾರೆ.

ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಗಳಿಗೆ ಫಲಾನುಭವಿ ಆಧಾರ್ ವಿವರ ಕಡ್ಡಾಯಗೊಳಿಸಲಾಗಿದೆ. ಆಧಾರ್ ವಿವರ, ಮೊಬೈಲ್ ಸಂಖ್ಯೆ, ವಿಳಾಸ, ಬ್ಯಾಂಕ್ ಖಾತೆ ವಿವರಗಳು ಸರಿಯಾಗಿರಬೇಕು. ಆದರೆ, ಬಹುಪಾಲು ಫಲಾನುಭವಿಗಳ ವಿವರಗಳು ತಪ್ಪಾಗಿವೆ. ಕೆಲವರು ಹಲವು ವರ್ಷಗಳಿಂದ ಇ-ಕೆವೈಸಿ ಮಾಡಿಸಿಕೊಂಡಿಲ್ಲ. ಹೀಗಾಗಿ ಯೋಜನೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಆಧಾರ್ ವಿವರ ತಿದ್ದುಪಡಿಗಾಗಿ ಜನರು ಆಧಾರ್ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೇಂದ್ರಗಳಿರದ ಕಾರಣ ನಿತ್ಯ ತಹಸೀಲ್ದಾರ್ ಕಚೇರಿ, ಕರ್ನಾಟಕ್ ಒನ್, ಬ್ಯಾಂಕ್, ಅಂಚೆ ಕಚೇರಿ ಹಾಗೂ ಆಧಾರ್ ಸೇವಾ ಕೇಂದ್ರಗಳಲ್ಲಿ ಜನ ಜಂಗುಳಿ ಕಂಡು ಬರುತ್ತಿದೆ. ಹಗಲು-ರಾತ್ರಿ ಎನ್ನದೇ ಸರತಿ ನಿಲ್ಲುತ್ತಿದ್ದಾರೆ. ಕಾದು ಕಾದು ಸಾಕಾಗಿ ಸರತಿಯಲ್ಲಿ ಕಲ್ಲು ಇಡುತ್ತಿದ್ದಾರೆ. ಕೆಲವರು ಮಕ್ಕಳನ್ನು ನಿಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net