ಆಧಾರ್ ತಿದ್ದುಪಡಿಗೆ ಪರದಾಟ!

web2
ಮೂಡಲಗಿ ಪಟ್ಟಣದ ದೂರವಾಣಿ ಕೇಂದ್ರದ ಎದುರು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಮಕ್ಕಳೊಂದಿಗೆ ಸರತಿ ಕುಳಿತಿರುವ ಪಾಲಕರು.
Published on

ಮೂಡಲಗಿ: ಭಾರತ ಸರ್ಕಾರದಿಂದ ಪ್ರಜೆಗಳಿಗೆ ವಿಶಿಷ್ಠ ಗುರುತಿನ ಚೀಟಿ ನೀಡಲಾಗಿದ್ದು, ಎಲ್ಲದಕ್ಕೂ ಆಧಾರ್ ಕಡ್ಡಾಯ ಮಾಡಲಾಗಿದೆ. ಯಾವುದೇ ಸವಲತ್ತು ಪಡೆಯಲು ಆಧಾರ್ ಕಡ್ಡಾಯ. ಆದರೆ, ಶಾಲಾ ಮಕ್ಕಳು ಈ ಚೀಟಿ ಪಡೆಯಲು ಆಧಾರ್ ಕೇಂದ್ರಗಳ ಮುಂದೆ, ಬೆಳಗಿನ ಜಾವ ಸರತಿ ನಿಂತು ಕಾರ್ಡ್ ಮಾಡಿಸಬೇಕಾದ ದುಸ್ಥಿತಿ ಎದುರಾಗಿದೆ.

ಮಕ್ಕಳ ಶಾಲಾ ದಾಖಲಾತಿ ಪ್ರಕಾರ ಆಧಾರ್ ಗುರುತಿನ ಚೀಟಿ ಇರುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದ್ದು, ಅದರಂತೆ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ದಾಖಲಾತಿ ಜತೆಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಮಕ್ಕಳ ಆಧಾರ್ ಗುರುತಿನ ಚೀಟಿಯಲ್ಲಿ ಮಕ್ಕಳ ಹೆಸರಿನ ಮುಂದೆ ತಂದೆ ಹೆಸರು ಇಲ್ಲದೆ ಇರುವುದರಿಂದ ಆಧಾರ್ ಸಂಖ್ಯೆ ಜೋಡಣೆ ಆಗುತ್ತಿಲ್ಲ. ಇದರಿಂದ ಮಕ್ಕಳ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಪಾಲಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ದಿನಗಳ ಹಿಂದೆ ಆಧಾರ್ ಕೇಂದ್ರಗಳನ್ನು ಸರ್ಕಾರಿ ಕಚೇರಿಗಳಾದ ಅಟಲ್‌ಜಿ ಜನಸ್ನೇಹಿ ಕೇಂದ್ರ, ಮಿನಿ ವಿಧಾನಸೌಧ, ಅಂಚೆ ಕಚೇರಿ, ರಾಷ್ಟ್ರೀಕತ ಬ್ಯಾಂಕ್ ಹಾಗೂ ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಮಾಡಲು ಸರ್ಕಾರದ ಅನುಮೋದನೆ ಸಿಕ್ಕಿತ್ತು. ಆದರೆ, ಕೆಲವು ದಿನಗಳಿಂದ ಪಟ್ಟಣದ ದೂರವಾಣಿ ಕೇಂದ್ರ ಹಾಗೂ ಸಿಎಸ್‌ಸಿ ಕೇಂದ್ರಗಳು, ರಾಷ್ಟ್ರೀಕತ ಬ್ಯಾಂಕ್,ಅಂಚೆ ಕಚೇರಿಗಳಲ್ಲಿ ಬಿಟ್ಟರೆ ಇದುವರೆಗೂ ಗ್ರಾಪಂಗಳಲ್ಲಿ ಆಧಾರ್ ಕೇಂದ್ರ ಪ್ರಾರಂಭವಾಗಿಲ್ಲ. ಹೀಗಾಗಿ ಮಕ್ಕಳೊಂದಿಗೆ ಪಾಲಕರು ಸಹ ಬೆಳಗಿನ ಜಾವ ಸರದಿಯಲ್ಲಿ ನಿಲ್ಲಬೇಕಾಗಿದೆ.

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಕ್ಕಳ ಆಧಾರ್ ಕಾರ್ಡ್ ತಿದ್ದುಪಡಿ ಆಗಬೇಕು. ಆದರೆ, ಆಧಾರ್ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಇಲ್ಲದೆ ಇರುವುದರಿಂದ, ಜನರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಆಧಾರ್ ಕೇಂದ್ರದ ಬಳಿ ಕಾಲ ಕಳೆಯಬೇಕಾಗಿದೆ. ತಾಲೂಕಿನ 20 ಗ್ರಾಪಂ ವ್ಯಾಪ್ತಿಯ 48 ಗ್ರಾಮಗಳ ಜನರ ಗೋಳು ಹೇಳತೀರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net