

ನೆಲಮಂಗಲ: ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸೇವೆಯನ್ನು ಒದಗಿಸುವ ಜವಬ್ದಾರಿಯನ್ನು ಅಂಚೆ ಕಚೇರಿ, ಕೆಲ ಬ್ಯಾಂಕ್‌ಗಳಿಗೂ ಹಂಚಿಕೆ ಮಾಡಿದ್ದು, ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ವಿಚಾರವಾಗಿ ಅಂಚೆಕಚೇರಿ, ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಸೇರಿ ಇನ್ನಿತರ ನ್ಯೂನತೆ ಸರಿಪಡಿಸಿಕೊಳ್ಳಲು ಸಾರ್ವಜನಿಕರು ಕೇವಲ ತಾಲೂಕು ಕಚೇರಿಗೆ ಬರುತ್ತಿದ್ದು, ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಮಧ್ಯರಾತ್ರಿ, ಬೆಳಗಿನ ಜಾವಕ್ಕೆ ಕಚೇರಿ ಬಳಿ ಬಂದು ಕಾಯುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸೇವೆಯನ್ನು ತಾಲೂಕಿನ ಕೆಲ ಅಂಚೆಕಚೇರಿ, ಬ್ಯಾಂಕ್‌ಗಳಿಗೂ ನೀಡಿದ್ದು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂಬ ದೂರು ಸಾರ್ವಜನಿಕರಿಂದ ಕೇಳಿಬಂದಿರುವುದರಿಂದ ಸಭೆ ಕರೆಯಲಾಗಿದೆ ಎಂದರು.
ದಿನಕ್ಕೆ ಕನಿಷ್ಠ 30 ಮಂದಿಗೆ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯಗಳನ್ನು ಅಂಚೆಕಚೇರಿ, ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಮಾಡಿಕೊಡಬೇಕು. ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಹಿಂದೆ ಇದ್ದಂತೆ ಗ್ರಾಮ ಪಂಚಾಯಿತಿ ಕಚೇರಿ ಮಟ್ಟದಲ್ಲೂ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗೆ ಅವಕಾಶ ಮಾಡಿಕೊಡುವುದರ ಜತೆಗೆ ತಾಲೂಕು ಕೇಂದ್ರದಲ್ಲಿ 3 ದಿನಗಳ ಕಾಲ ಅದಾಲತ್ ರೂಪದಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಎಲ್ಲೆಲ್ಲಿ ಸೌಲಭ್ಯ ಲಭ್ಯ: ತಾಲೂಕು ಕೇಂದ್ರದಲ್ಲಿರುವ ತಹಸೀಲ್ದಾರ್ ಕಚೇರಿಯ ಜತೆಗೆ ಪಟ್ಟಣದ ಕೆನರಾಬ್ಯಾಂಕ್, ಅಂಚೆಕಚೇರಿ, ತಾಲೂಕಿನ ಅರಿಶಿನಕುಂಟೆ ಸ್ಟೇಟ್ ಬ್ಯಾಂಕ್ ಇಂಡಿಯಾ ಕಚೇರಿ, ಸೋಂಪುರ ಹೋಬಳಿ ಕೇಂದ್ರದ ಅಂಚೆಕಚೇರಿ, ನಾಡಕಚೇರಿ, ತ್ಯಾಮಗೊಂಡ್ಲು ಹೋಬಳಿ ಕೇಂದ್ರದ ಅಂಚೆಕಚೇರಿ ನಾಡಕಚೇರಿಗಳಲ್ಲೂ ಆಧಾರ್‌ಕಾರ್ಡ್ ನೋಂದಣಿ, ತಿದ್ದುಪಡಿಗೆ ಅವಕಾಶ ಮಾಡಲಾಗಿದೆ ಎಂದು ವಿಶೇಷ ತಹಸೀಲ್ದಾರ್ ಎಂ.ಎಸ್.ರಮೇಶ್ ಮಾಹಿತಿ ನೀಡಿದರು.
ಬೆಳಕಿಗೆ ಬಂದ ಸತ್ಯ: ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸೇವೆ ಒದಗಿಸಲು ಕೆಲ ಬ್ಯಾಂಕ್‌ಗಳ ಅಧಿಕಾರಿಗಳು ಆಸಕ್ತಿ ವಹಿಸದಿರುವುದು ಒಂದಡೆಯಾದರೆ ಕೆಲ ಬ್ಯಾಂಕ್‌ಗಳಲ್ಲಿ ಸ್ಥಳದ ಅವಕಾಶ ಸೌಲಭ್ಯಗಳ ಕೊರತೆ ಇದ್ದು ಸೇವೆ ದೊರೆಯುತ್ತಿಲ್ಲ ಎಂಬ ಸತ್ಯ ಸಭೆಯಲ್ಲಿ ಬೆಳಕಿಗೆ ಬಂತು.