ಆಧಾರ ಕೇಂದ್ರಗಳ ಕಾರ್ಯ ನಿರ್ವಹಣೆಗೆ ಕ್ರಮ

0bf76ccc-9c45-43a5-a4a5-478fa8794e98
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನವಲಗುಂದ ಹಾಗೂ ಕಲಘಟಗಿಯಲ್ಲಿ ಜು. 3ರಿಂದ ಆಧಾರ ಸೇವಾ ಕೇಂದ್ರಗಳ ಮೂಲಕ ವಿಶೇಷ ಆಧಾರ ಕ್ಯಾಂಪ್​ ಆಯೋಜಿಸಲು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.
ಕಲಘಟಗಿ ತಾಲೂಕಿನಲ್ಲಿ ಆಧಾರ ತಿದ್ದುಪಡಿ, ಬ್ಯಾಂಕ್​ ಖಾತೆಗಳ ಜೋಡಣೆ ಸೇರಿ ಆಧಾರ ಸಂಬಂಧಿಸಿದ ಕಾರ್ಯಕ್ಕೆ ಪಕ್ಕದ ನಗರಗಳಿಗೆ ಅಲೆಯುವಂತಾಗಿತ್ತು. ಈ ಕುರಿತು ವಿಜಯವಾಣಿ ಪತ್ರಿಕೆಯ ಜು. 2ರ ಸಂಚಿಕೆಯಲ್ಲಿ "ಆಧಾರ ನೋಂದಣಿ ಕೇಂದ್ರಗಳೆಲ್ಲ ಸ್ಥಗಿತ' ಶೀರ್ಶಿಕೆ ಅಡಿ ವಿವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಇದರ ಪರಿಣಾಮ ಜಿಲ್ಲಾಧಿಕಾರಿ ವಿಶೇಷ ಕ್ಯಾಂಪ್​ಗೆ ಆದೇಶಿಸಿದ್ದಾರೆ.
ಜು. 3ರಿಂದ ಸೀಮಿತ ಅವಧಿಗೆ ನವಲಗುಂದ ಪಟ್ಟಣ ಮತ್ತು ಕಲಘಟಗಿ ಪಟ್ಟಣದಲ್ಲಿ ವಿಶೇಷ ಆಧಾರ ಕ್ಯಾಂಪ್​ ಸಂಘಟಿಸಲು ಆದೇಶಿಸಲಾಗಿದೆ. ನವಲಗುಂದ ಆಧಾರ ಕ್ಯಾಂಪ್​ ಸಂಯೋಜಕರಾಗಿ ಡಿಸಿ ಕಚೇರಿಯ ಜಿಲ್ಲಾ ಆಧಾರ ಸಮಾಲೋಚಕರನ್ನು ಹಾಗೂ ಕಲಘಟಗಿ ಆಧಾರ ಕ್ಯಾಂಪ್​ ಸಂಯೋಜಕರನ್ನಾಗಿ ಡಿಸಿ ಕಚೇರಿಯ ಎಜೆಎಸ್​ಕೆ. ಸಮಾಲೋಚಕರನ್ನು ನಿಯೋಜಿಸಲಾಗಿದೆ.
ಕಲಘಟಗಿ ಹಾಗೂ ಅಣ್ಣಿಗೇರಿ ತಹಸೀಲ್ದಾರ ಕಚೇರಿಗಳಲ್ಲಿನ ನಾಡಕಚೇರಿಯ ಆಧಾರ ಸೇವಾ ಕೇಂದ್ರಗಳು ಸಿಬ್ಬಂದಿಯ ಗೈರು ಹಾಗೂ ತಾಂತ್ರಿಕ ಕಾರಣಗಳಿಂದ ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಈ ಕೇಂದ್ರಗಳಿಗೆ ಹೊಸ ಆಪರೇಟರ್​ ನೇಮಿಸಲು ಕ್ರಮವಹಿಸಲಾಗಿದ್ದು, ಅಲ್ಲಿವರೆಗೆ ಅಗತ್ಯ ಸಿಬ್ಬಂದಿ ನೇಮಿಸಿ, ಅವರಿಗೆ ತರಬೇತಿ ನೀಡಲಾಗಿದೆ. ನೇಮಿಸಿದ ಸಿಬ್ಬಂದಿಗೆ ಅಗತ್ಯ ಗುರುತಿನ ಸಂಖ್ಯೆ ಹಾಗೂ ಅಗತ್ಯ ಅನುಮತಿ ಬರಲಿದೆ. ಅಲ್ಲಿಯವರೆಗೆ ಜಿಲ್ಲಾ ಸಮಾಲೋಚಕರು ನಿರ್ವಹಣೆ ಮಾಡಲಿದ್ದಾರೆ.
ಕಲಘಟಗಿ ಮತ್ತು ನವಲಗುಂದ ಪಟ್ಟಣದ ಸಾರ್ವಜನಿಕರು ಆಧಾರ ವಿಶೇಷ ಕ್ಯಾಂಪ್​ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net