ಆದ್ರಳ್ಳಿಗೆ ಸರಬರಾಜಾಗುತ್ತಿಲ್ಲ ನದಿ ನೀರು

11 lxr 2
Published on

ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಮೂರು ಸಾವಿರಕ್ಕಿಂತೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಮೂರು ತಿಂಗಳಿಂದ ನದಿ ನೀರಿನ ಸರಬರಾಜು ನಿಂತಿದೆ. ಗ್ರಾಮ ವ್ಯಾಪ್ತಿಯ 8 ಬೋರ್​ವೆಲ್​ಗಳಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆ, ಬೋರ್​ವೆಲ್ ರಿಪೇರಿ, ಇತರೆ ತಾಂತ್ರಿಕ ತೊಂದರೆಯಾದಲ್ಲಿ ನೀರಿನ ಸಮಸ್ಯೆ ಉಂಟಾಗುವುದಂತೂ ನಿಶ್ಚಿತ.

ಗ್ರಾಮದ ದೇವಿಹಾಳ ರಸ್ತೆಗೆ ಹೊಂದಿಕೊಂಡಿರುವ ಮೇಗಿಲ ತಾಂಡಾದಲ್ಲಿ ಕಳೆದ ಒಂದು ವಾರದಿಂದ ಬೋರ್​ವೆಲ್ ದುರಸ್ತಿಯಲ್ಲಿದ್ದು, ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಇಲ್ಲಿನ ನಿವಾಸಿಗಳು ದೂರದ ವಡ್ಡರ ಓಣಿಯಿಂದ ನೀರು ತರಬೇಕಾದ ಅನಿವಾರ್ಯತೆಯಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಅಸಮಾಧಾನಗೊಂಡ ಓಣಿಯ ನಿವಾಸಿಗಳಾದ ದುಂಡೇಶ ಲಮಾಣಿ, ದೇವಪ್ಪ ಲಮಾಣಿ ಸೇರಿ ಹಲವರು, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಡಿಒ ಡಿ.ಡಿ. ಹಂದಿಗನೂರ ಅವರನ್ನು ಆಗ್ರಹಿಸಿದ್ದಾರೆ. ಜನರ ಆಗ್ರಹದ ಮೇರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬೋರ್​ವೆಲ್ ಪದೇಪದೆ ರಿಪೇರಿಗೆ ಬರುತ್ತಿರುವುದರಿಂದ ಮತ್ತು ಮುಖ್ಯವಾಗಿ ಕಳೆದ ಮೂರು ತಿಂಗಳಿಂದ ನದಿ ನೀರೇ ಬಾರದ್ದರಿಂದ ಜನರು ನೀರಿನ ತೊಂದರೆ ಅನುಭವಿಸುವಂತಾಗಿದೆ. ಬೋರ್​ವೆಲ್ ದುರಸ್ತಿ ಮಾಡಿಸಬೇಕು ಮತ್ತು ನದಿ ನೀರು ಸರಬರಾಜು ಪ್ರಾರಂಭವಾಗಬೇಕು. | ಶೇಖಪ್ಪ ಲಮಾಣಿ ಗ್ರಾಪಂ ಮಾಜಿ ಸದಸ್ಯ

ನದಿ ನೀರಿನ ಸರಬರಾಜು ನಿಂತಿದ್ದರಿಂದ ನೀರಿನ ಸಮಸ್ಯೆಯಾಗಿತ್ತು. ಈಗ ಬೋರ್​ವೆಲ್ ರಿಪೇರಿ ಮಾಡಿಸಲಾಗಿದೆ. ಸದ್ಯ ಗ್ರಾಮದಲ್ಲಿನ 8 ಬೋರ್​ವೆಲ್ ಸುಸ್ಥಿತಿಯಲ್ಲಿವೆ. ತಾತ್ಕಾಲಿಕವಾಗಿ ಟ್ಯಾಂಕರ್ ನೀರಿನ ಸರಬರಾಜು ಮಾಡಲಾಗಿದೆ. | ಡಿ.ಡಿ. ಹಂದಿಗನೂರ ಪಿಡಿಒ ಆದ್ರಳ್ಳಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net