

ವಿಜಯಪುರ : ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು ಉಳಿಯದಂತೆ ಆದ್ಯತೆ ಮೇಲೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳು ಕಟಾವು ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಶುಕ್ರವಾರ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು ಕಟಾವು ಆಗುವುದಿಲ್ಲ ಎನ್ನುವ ಆತಂಕದಲ್ಲಿದ್ದಾರೆ. ಎಲ್ಲ ಸಕ್ಕರೆ ಕಾರ್ಖಾನೆಯವರು ಯಾವುದೇ ರೈತರ ಕಬ್ಬು ಉಳಿಯದಂತೆ ಎಲ್ಲ ರೈತರ ಕಬ್ಬನ್ನು ಆದ್ಯತೆ ಮೇಲೆ ಕಟಾವು ಮಾಡಲು ತಿಳಿಸಿದರು.
ಯಾವುದೇ ರೈತರಿಂದ ಕಟಾವಿಗೆ ಹಾಗೂ ಹಣ ಪಾವತಿಗೆ ಸಂಬಂಧಿಸಿದಂತೆ ದೂರುಗಳು ಬರದಂತೆ ನೋಡಿಕೊಳ್ಳಬೇಕು. ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಕಬ್ಬು ಆಯುಕ್ತರಿಗೆ ವರದಿ ಸಲ್ಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವಿನ ಹಣ ಪಾವತಿ ಮಾಡದೆ ಇದ್ದರೆ ಜನವರಿ ಅಂತ್ಯದ ವರೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೆ ಈ ತಿಂಗಳ ಅಂತ್ಯರೊಳಗಾಗಿ ಪಾವತಿ ಮಾಡಬೇಕು ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸಿದ್ಧರಾಮ ಮಾರಿಹಾಳ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಗಳವರು ಕಬ್ಬು ನುರಿಸಿದ, ರೈತರಿಗೆ ಹಣ ಪಾವತಿ ಮಾಡಿದ ಇನ್ನೂ ಪಾವತಿ ಮಾಡಬೇಕಾಗಿರುವ ಮೊತ್ತದ ಕುರಿತು ಕಾರ್ಖಾನೆವಾರು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ, ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿದೇಶಕರು ಉಪಸ್ಥಿತರಿದ್ದರು.