ಆದ್ಯತೆ ಮೇರೆಗೆ ಲಸಿಕೆ ನೀಡಿ

12 Jaggu 6-Web
ಚನ್ನಮ್ಮ ಕಿತ್ತೂರಿನಲ್ಲಿ ಸಚಿವ ಗೋವಿಂದ ಕಾರಜೋಳ ಕರೊನಾ ಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿದರು. ಶಾಸಕ ಮಹಾಂತೇಶ ದೊಡಗೌಡರ, ಜಿಪಂ ಸಿಇಒ ಡಾ. ಎಚ್.ವಿ. ದರ್ಶನ, ಇತರ ಅಧಿಕಾರಿಗಳು ಇದ್ದರು.
Published on

ಬೈಲಹೊಂಗಲ/ಚನ್ನಮ್ಮನ ಕಿತ್ತೂರ: ಜಿಲ್ಲೆಗೆ ಅಗತ್ಯವಿರುವ ಕರೊನಾ ಲಸಿಕೆ ಪೂರೈಕೆಯಾದ ತಕ್ಷಣವೇ ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ನಿಯಂತ್ರಣಕ್ಕೆ ಸಂಬಂಂಧಿಸಿದಂತೆ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲ ಡೋಸ್ ಲಸಿಕೆ ಪಡೆದವರು ಎರಡನೇ ಡೋಸ್ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ಲಸಿಕೆ ಸರಬರಾಜು ಆದ ಕೂಡಲೇ ಅವರಿಗೆ ಲಸಿಕೆ ನೀಡಬೇಕು. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿ ತಾಲೂಕಿನಲ್ಲಿ ಜನರ ಗಂಟಲು ದ್ರವ ಮಾದರಿ ತಪಾಸಣಾ ಪ್ರಮಾಣ ಹೆಚ್ಚಿಸುವ ಮೂಲಕ ಸೋಂಕಿತರನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ಅಥವಾ ಹೋಮ್ ಐಸೋಲೇಷನ್‌ಗೆ ಕ್ರಮ ಕೈಗೊಳ್ಳಬೇಕು ಎಂದರು.

ನಿಗಾ ಇರಲಿ: ಲಕ್ಷಣ ರಹಿತ ಸೋಂಕಿತರನ್ನು ತಾಲೂಕುಗಳಲ್ಲಿರುವ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗುತ್ತಿದೆ. ಈ ರೀತಿಯ ಐಸೋಲೇಷನ್‌ನಲ್ಲಿ ಇರುವ ಸೋಂಕಿತರ ಆರೋಗ್ಯದ ಮೇಲೆ ಪ್ರತಿದಿನ ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಮನೆಯಲ್ಲಿಯೇ ಇರುವ ಲಕ್ಷಣ ರಹಿತ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಉಚಿತವಾಗಿ ಔಷಧ ಕಿಟ್ ನೀಡಬೇಕು. ಆರೋಗ್ಯ ಇಲಾಖೆಯ ತಂಡಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿದಿನ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ತುರ್ತು ಚಿಕಿತ್ಸೆಯ ಅಗತ್ಯವಿರುವವರನ್ನು ಸಕಾಲಕ್ಕೆ ಆಸ್ಪತ್ರೆಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಡಿಸಿ ಎಂ.ಜಿ.ಹಿರೇಮಠ ಅವರು ಜಿಲ್ಲೆಯ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿದರು. ಜಿಪಂ ಸಿಇಒ ಡಾ.ಎಚ್.ವಿ. ದರ್ಶನ, ಎಸ್ಪಿ ಲಕ್ಷ್ಮಣ ನಿಂಬರಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಪಂ ಸದಸ್ಯ ಶಂಕರ ಮಾಡಲಗಿ, ಡಿಸಿ ಮಹಾಂತೇಶ ಹಿರೇಮಠ, ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಕರೊನಾ ವಾರ್‌ರೂಮ್ ಕಾರ್ಯ ನಿರ್ವಹಣೆ ಪರಿಶೀಲಿಸಿದ ಗೋವಿಂದ ಕಾರಜೋಳ ಅವರು, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಸಿಬ್ಬಂದಿಗೆ ಸೂಚಿಸಿದರು. ಬಳಿಕ ಬೈಲಹೊಂಗಲ ತಾಲೂಕಿಗೆ ಭೇಟಿ ನೀಡಿದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದರು.

ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಅಗತ್ಯ ಕೈಗೊಳ್ಳಬೇಕು. ಅಲ್ಲದೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಆಕ್ಸಿಜನ್, ವೆಂಟಿಲೇಟರ್ ಹಾಗೂ ಬೆಡ್ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಬೇಕು. ಶೀಘ್ರ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಭರ್ತಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು.| ಮಹಾಂತೇಶ ದೊಡಗೌಡರ ಶಾಸಕಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೈಲಹೊಂಗಲದ ತಾಲೂಕು ಆಸ್ಪತ್ರೆಗೆ ಬೆಡ್, ವೆಂಟಿಲೇಟರ್ ಸೇರಿ ಅಗತ್ಯ ವ್ಯವಸ್ಥೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರಲಾಗಿದೆ.| ಮಹಾಂತೇಶ ಕೌಜಲಗಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net