ಆದೇಶ ಪಾಲಿಸದ ಜನ

27 vikram 1A
Published on

ಧಾರವಾಡ: ಜಿಲ್ಲಾಡಳಿತಕ್ಕೆ ಜನರನ್ನು ನಿಯಂತ್ರಣ ಮಾಡುವುದೇ ಸವಾಲಿನ ಕೆಲಸವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ತೆರಳಿದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಿದ್ದರೂ, ಜನ ಮಾತ್ರ ಈ ಆದೇಶ ಪಾಲನೆ ಮಾಡದೆ ಎಂದಿನಂತೆ ತೆರಳುತ್ತಿರುವುದು ವಿಪರ್ಯಾಸವೇ ಸರಿ.

ಸರ್ಕಾರದ ಆದೇಶ ಪಾಲಿಸುವುದಿರಲಿ, ವೈರಸ್ ಭೀತಿ ಸಹ ಜನರಲ್ಲಿ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುವಂತಾಗಿದೆ. ಈ ಸಮಸ್ಯೆ ನಗರ ಪ್ರದೇಶಗಳಲ್ಲಿ ಮಾತ್ರ ಎನ್ನುವಂತಾಗಿದೆ. ಗ್ರಾಮೀಣ ಪ್ರದೇಶದ ಜನ ಈಗಾಗಲೇ ಎಚ್ಚೆತ್ತು ತಮ್ಮ ಗ್ರಾಮಕ್ಕೆ ದಿಗ್ಬಂಧನ ಸೇರಿ ಹಲವು ಉಪಾಯಗಳನ್ನು ಕಂಡುಕೊಳ್ಳುವ ಮೂಲಕ ಜನರು ಗುಂಪಾಗಿ ಸೇರುವುದನ್ನು ತಪ್ಪಿಸುವ ಕೆಲಸ ಮಾಡಿದ್ದಾರೆ.

ಅವಧಿಗೂ ಪೂರ್ವ ಬಂದ್: ನಗರದ ಹೊಸ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟ ಮಾಡಲು ಬೆಳಗ್ಗೆ ಕೆಲ ತಾಸು ಅವಕಾಶ ನೀಡಲಾಗಿದೆ. ತರಕಾರಿ ಸಿಗುತ್ತೋ? ಇಲ್ಲವೋ? ಎಂಬ ರೀತಿಯಲ್ಲಿ ಆವರಣಕ್ಕೆ ಆಗಮಿಸುತ್ತಿದ್ದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ವಹಿವಾಟು ನಡೆಸಿದ್ದರು. ಇದೇ ಕಾರಣಕ್ಕೆ ಶುಕ್ರವಾರ ಬೆಳಗ್ಗೆ ಎಪಿಎಂಸಿ ಮೇಲೆ ದಾಳಿ ನಡೆಸಿದ ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಲಾಠಿ ರುಚಿ ತೋರಿಸುವ ಮೂಲಕ ಜನರನ್ನು ಖಾಲಿ ಮಾಡಿಸಿದರು.

ದಂಡ ಹಾಕಲು ಮುಂದಾದ ಪೊಲೀಸರು: ಲಾಕ್ ಡೌನ್ ಇದ್ದರೂ ಸುಖಾಸುಮ್ಮನೆ ಬೈಕ್ ಮೇಲೆ ಸಂಚಾರ ನಡೆಸುವವರ ಸಂಖ್ಯೆಯೇ ಹೆಚ್ಚುತ್ತಿದೆ. ಈ ರೀತಿ ಓಡಾಡಬೇಡಿ ಎಂದು ಹೇಳುತ್ತಿದ್ದ ಪೊಲೀಸರು ಕೊನೆಗೆ ಲಾಠಿ ರುಚಿ ತೋರಿಸಿದರು. ಅದಕ್ಕೂ ಕ್ಯಾರೆ ಎನ್ನದ ಜನರು ಮತ್ತೆ ಬೈಕ್ ಮೇಲೆ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಇದರಿಂದ ರೋಸಿ ಹೋದ ಪೊಲೀಸರು ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಲೈಸನ್ಸ್ ಇಲ್ಲದವರು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವವರನ್ನು ತಡೆದು ದಂಡ ಹಾಕಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net