

ಎಚ್.ಡಿ.ಕೋಟೆ: ಕರ್ನಾಟಕದ ಜೇನುಕುರುಬ, ಕೊರಗ ಆದಿವಾಸಿಗಳನ್ನು ಕೇಂದ್ರ ಸರ್ಕಾರ ಆದಿ ಬುಡಕಟ್ಟುಗಳು(ಪಿವಿಟಿಜಿ) ಎಂಬುದಾಗಿ ಗುರುತಿಸಿದ್ದರೂ ಸಂವಿಧಾನಬದ್ಧ ಹಕ್ಕುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆದಿವಾಸಿ ಮುಖಂಡರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಂಗಳವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಹಾಗೂ ಬುಡಕಟ್ಟು ಕೇಂದ್ರ ಸಚಿವ ಅರ್ಜುನ್ ಮುಂಡಾರ್ ಅವರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲೆಯ ಕೊರಗ ಮತ್ತು ಜೇನು ಕುರುಬ ಸಮುದಾಯದ ಮುಖಂಡರು ಹಕ್ಕೊತ್ತಾಯ ಮಂಡಿಸಿದರು.
ಕೆಲವು ಹಕ್ಕು ಒತ್ತಾಯಗಳು ಜಾರಿಯಾಗದ ಹೊರತು ಈ ಎರಡು ಬುಟಕಟ್ಟು ಸಮುದಾಯಗಳು ಉನ್ನತಿಯಾಗಲು ಅಸಾಧ್ಯವಾಗಿದೆ. ನಾವು ಈ ನೆಲದ ಮೂಲನಿವಾಸಿಗಳು, ಈ ನೆಲ-ಜಲ, ಕಾಡು ನಮ್ಮ ಜನ್ಮಸಿದ್ಧ ಹಕ್ಕು. ಪಿವಿಟಿಜಿ ವರ್ಗಕ್ಕೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಕುಡಿಯುವ ನೀರು, ಮನೆ, ರಸ್ತೆ, ವಿದ್ಯುತ್, ಆಹಾರ ಇಂತಹ ಸೌಲಭ್ಯಗಳು ಬದುಕುವುದಕ್ಕಾಗಿ ಮಾತ್ರ ಸಿಗುತ್ತಿವೆ. ಇನ್ನು ಹಲವು ಮೂಲಸೌಲಭ್ಯ ಪಡೆದುಕೊಳ್ಳಲು ಕೆಲವು ಮುಖ್ಯ ಕಾರ್ಯ ಯೋಜನೆಗಳು ಜಾರಿಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಜೇನು ಕುರುಬ ಮುಖಂಡ ವಡ್ಡರಗುಡಿ ಚಿಕ್ಕಣ್ಣ ಮಾತನಾಡಿ, ಕರ್ನಾಟಕದಲ್ಲಿ ಕೊರಗ ಮತ್ತು ಜೇನುಕುರುಬ ಈ ಎರಡು (ಡಬ್ಲೂೃಟಿಜಿ)ಸಮುದಾಯಗಳು ಇದ್ದು,ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಾಗೂ ಜನಸಂಖ್ಯಾವಾರು ಮುಂದಿರುವ ಬಲಿಷ್ಠವಾದ ಇತರ ಬುಡಕಟ್ಟು ಸಮುದಾಯಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಬರುವ ಎಲ್ಲ್ಲ ಸೌಲಭ್ಯಗಳು ಬಲಿಷ್ಠರ ಪಾಲಾಗುತ್ತಿವೆ. ಆದ್ದರಿಂದ ಪಿವಿಟಿಜಿ ಅಡಿಯಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ದೆಹಲಿಗೆ ತೆರಳಿದ್ದ ನಿಯೋಗದಲ್ಲಿ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಶ್ರೀನಿವಾಸ್, ಪ್ರಭಾಅರಸ್, ಮೂಲ ಬುಡಕಟ್ಟು ಜೇನುಕುರುಬ ಸಮುದಾಯದ ಮುಖಂಡರಾದ ಮಧುಕುಮಾರ್, ಪಿರಿಯಾಪಟ್ಟಣದ ರಮೇಶ್, ಚಿಕ್ಕಮಂಗಳೂರು ಜಿಲ್ಲೆಯ ಕೊರಗ ಸಮುದಾಯದ ವಕೀಲೆ ರತ್ನ ಕುಂದರ್, ಸುಂದರ್ ಇತರರು ಭಾಗವಹಿಸಿದ್ದರು.