

ಮೈಸೂರು: ನಾಗರಹೊಳೆಯ ಅರಣ್ಯ ಭಾಗದಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಮಾನವ ಹಕ್ಕುಗಳ ವಕೀಲ ಕ್ಲಿಫ್ಟಿನ್ ಡಿ.ರೋಜೊರಿಯೊ ದೂರಿದರು.
ಮೂಲನಿವಾಸಿ ದಿನಾಚರಣೆ ಅಂಗವಾಗಿ ಆದಿವಾಸಿ ಸಂಘರ್ಷ ಮೋರ್ಚಾ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕದ ಆದಿವಾಸಿಗಳು: ನಮ್ಮ ಹಕ್ಕು, ನಮ್ಮ ಭವಿಷ್ಯ’ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಶೇ.7ರಷ್ಟು ಆದಿವಾಸಿಗಳಿದ್ದಾರೆ. ಇವರನ್ನು ವ್ಯವಸ್ಥಿತವಾಗಿ ಅರಣ್ಯದಿಂದ ಹೊರಹಾಕಲು ಪ್ರಯತ್ನಗಳು ನಡೆದಿವೆ ಎಂದರು.
ಕರಡಿಕಲ್ಲಿನಲ್ಲಿ ಬುಡಕಟ್ಟು ಸಮುದಾಯದ ಬಹುದೊಡ್ಡ ಹೋರಾಟ ನಡೆದ ಬಳಿಕ ಇವತ್ತು 150 ಕುಟುಂಬಗಳಿಗೆ ಅಲ್ಲಿ ವಸತಿ ಕಲ್ಪಿಸಿಕೊಡುವ ಕೆಲಸವಾಗುತ್ತಿದೆ. ಹೀಗಾಗಿ, ಆದಿವಾಸಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಆದಿವಾಸಿಗಳನ್ನು ಭೂಮಿ, ಶಿಕ್ಷಣ, ಮೂಲಸೌಕರ್ಯಗಳಿಂದ ವಂಚಿಸಲಾಗಿದೆ. ಕೊಡಗಿನಲ್ಲಿ ಈಗಲೂ ಆದಿವಾಸಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದು, ಈ ಕುರಿತು ಯಾರು ಧ್ವನಿ ಎತ್ತಿಲ್ಲ. ಹೀಗಾದರೆ, ಆದಿವಾಸಿಗಳ ರಕ್ಷಣೆ ಯಾರು ಮಾಡಬೇಕು ಎಂದು ಪ್ರಶ್ನಿಸಿದರು. ದೇಶದಲ್ಲಿ ಈಗಲೂ ತಮ್ಮ ನಾಗರಿಕ ಹಕ್ಕು ಪಡೆದುಕೊಳ್ಳುವುದು ಆದಿವಾಸಿಗಳ ದೊಡ್ಡ ಸವಾಲಿನ ಕೆಲಸವಾಗಿದೆ ಎಂದರು.
ಕೊಡಗಿನಲ್ಲಿ ಆದಿವಾಸಿ ಸಮಾಜಕ್ಕೆ ಸೇರಿದ 18 ವರ್ಷದ ಹುಡುಗನ್ನು ಕೇವಲ ಒಂದು ಹಲಸು ಕದ್ದ ಎಂದು ಆರೋಪಿಸಿ ಮರದ ಮೇಲೆ ಕುಳಿತವನಿಗೆ ಗುಂಡು ಹೊಡೆದು ಹತ್ಯೆ ಮಾಡಲಾಯಿತು. ಯಾರು ಯಾರನ್ನು ಬೇಕಾದರೂ ಕೊಲ್ಲುವಂತಹ ಪರಿಸ್ಥಿತಿ ರಾಜ್ಯದಲ್ಲಿದೆ ಎಂದು ಕಳವಳವ್ಯಕ್ತಪಡಿಸಿದರು.
ಕೊಡಗಿನ ಆದಿವಾಸಿ ಸವಿತಾ ಮಾತನಾಡಿ, ಜಗತ್ತು ಮುಂದುವರಿದರೂ ಆದಿವಾಸಿಗಳಿಗೆ ನಾಗರಿಕರಾಗಿ ಬದುಕಲು ಅವಕಾಶ ಇನ್ನೂ ದೊರೆತಿಲ್ಲ. ನಮ್ಮ ಹೋರಾಟ, ವೇದನೆ ಕೇಳುವವರಿಲ್ಲ.
ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದೆ. ಮಕ್ಕಳಿಗೆ ಅಂಗನವಾಡಿ ಬೇಕಿದೆ. ಕೂಲಿಗೆ ತೆರಳಿದ ಸಂದರ್ಭದಲ್ಲಿ ಹೆಚ್ಚಿನ ಕೂಲಿ ಕೇಳಲು ಆಗದ ಪರಿಸ್ಥಿತಿಯಿದೆ. ದುಡಿಯಲು ಹೋಗದಿದ್ದರೆ ಆ ದಿನದ ಜೀವನ ಸಾಗುವುದಿಲ್ಲ ಎಂದು ಅಳಲು ತೋಡಿಕೊಂಡರು.
ಎಚ್.ಡಿ ಕೋಟೆ ಕೆಬ್ಬೇಪುರ ಹಾಡಿಯ ಸೀರಮ್ಮ ಪಾರ್ವತಿ ಮಾತನಾಡಿ, ಮಳೆಗಾಲದಲ್ಲಿ ಗುಡಿಸಲಿನಲ್ಲಿ ಬದುಕುವುದೇ ಕಷ್ಟವಾಗಿದೆ. ಹುಲಿ, ಚಿರತೆಗಳ ಕಾಟದಿಂದ ನಮ್ಮ ಜೀವಕ್ಕೆ ಬೆಲೆಯಿಲ್ಲದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಕಡೆಗೆ ತಿರುಗಿ ನೋಡುವುದಿಲ್ಲ. ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್‌ಗಳಿಲ್ಲದೇ ಬದುಕುತ್ತಿದ್ದು, ನಮ್ಮ ಮಕ್ಕಳ ಭವಿಷ್ಯಕ್ಕಾದರೂ ನಮ್ಮ ಹಕ್ಕು, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಆದಿವಾಸಿ ಸಂಘಟನೆಗಳ ಮುಖಂಡರಾದ ಕೊಡಗು ಮೂಲದ ಆದಿವಾಸಿಗಳು ಗೌರಿ, ತೋಲಾ ಬೋಳ್ಕಾ, ಪವನ, ಪಡುಕ, ಹರಪನಹಳ್ಳಿ ಪ್ರಸಾದ್, ಕೆಂಪಾಪುರ ಸೀರಮ್ಮ, ಹಕ್ಕಿಪಿಕ್ಕಿ ಜನಾಂಗದ ಸಮಿತ್ ಕುಮಾರ್ ಇನ್ನಿತರರಿದ್ದರು