

ಎಚ್.ಡಿ.ಕೋಟೆ: ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಸಲುವಾಗಿ ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಅರಿಯಲು ವಾಸ್ತವ್ಯ ಹೂಡಲು ಆರಂಭಿಸಿದ್ದೇನೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು.
ತಾಲೂಕಿನ ಪುನರ್ವಸತಿ ಸೊಳ್ಳೇಪುರ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬುಧವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿವಾಸಿಗಳ ನೋವು, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದು, ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ. ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುತ್ತೇನೆ. ಆದಿವಾಸಿಗಳ ಕಷ್ಟಗಳನ್ನು ಅರಿಯಲಿಕ್ಕಾಗಿಯೇ ನಾನು ಹಾಡಿ ವಾಸ್ತವ್ಯ ಹಮ್ಮಿಕೊಂಡಿದ್ದೇನೆ. ಮುಂದಿನ ವರ್ಷದೊಳಗಾಗಿ ಈ ಎಲ್ಲ ಸಮಸ್ಯೆಗಳಿಗೆ ಕೊನೆ ಹಾಡಲಾಗುವುದು ಎಂದು ಭರವಸೆ ನೀಡಿದರು.
ಆದಿವಾಸಿಗಳು ಪ್ರಾಣಿಗಳೊಂದಿಗೆ ನಿತ್ಯ ಸಂಘರ್ಷ ಎದುರಿಸುತ್ತಿದ್ದು, ಅದು ಅವರಿಗೆ ಅಭ್ಯಾಸವಾಗಿದೆ. ಆದರೆ ನೀವು ಸರ್ಕಾರವನ್ನು ಬೇಡಿಕೊಳ್ಳುವ ಅಭ್ಯಾಸವಾಗಬಾರದು. ಆದ್ದರಿಂದ ಸರ್ಕಾರವೇ ನಿಮ್ಮ ಬೆನ್ನ ಹಿಂದೆ ನಿಂತು ಸಮಸ್ಯೆ ಬಗೆಹರಿಸಲಿದೆ. ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮೊರಾರ್ಜಿ ಶಾಲೆಗೆ ಅಥವಾ ಏಕಲವ್ಯ ಶಾಲೆಗೆ ಸೇರಿಸುವ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಆದಿವಾಸಿಗಳ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಕೋರುತ್ತೇನೆ. ಆದಿವಾಸಿಗಳಿಗೆ ಯಾವುದೇ ಭಾಗದಲ್ಲೂ ತೊಂದರೆಯಾದರೂ ನಿಮ್ಮ ಜತೆ ಸರ್ಕಾರ ನಿಲ್ಲಲಿದೆ. ಸಮಸ್ಯೆ ಬಗೆಹರಿಸಲು ನಿಮ್ಮ ಜತೆ ಇರುತ್ತೇನೆ. ಆದಿವಾಸಿಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು. ವಸತಿ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ದೇಶದ ಕೀರ್ತಿ ತರಬೇಕು. 1ರಿಂದ ಪಿಯುಸಿ ವರೆಗಿನ ಮಾದರಿ ಶಾಲೆ ತೆರೆಯಲು ಇಲಾಖೆಗೆ ಆದೇಶ ಮಾಡಿದ್ದು, ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರಾರಂಭಿಸಲು ಜಾಗ ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಆದಿವಾಸಿಗಳಿಗೆ ನೀಡುತ್ತಿದ್ದ ಆರು ತಿಂಗಳ ಆಹಾರ ಪಡಿತರವನ್ನು ಒಂದು ವರ್ಷಕ್ಕೆ ನೀಡಲು ತೀರ್ಮಾನಿಸಲಾಗಿದೆ. ಕಾಡಿನಿಂದ ನಾಡಿಗೆ ಪುನರ್ವಸತಿ ಕಲ್ಪಿಸಿದ 3318 ಕುಟುಂಬಗಳಿಗೆ ಹಕ್ಕುಪತ್ರ ನೀಡದಿರುವುದು ಬೇಸರ ಉಂಟಾಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡುತ್ತೇನೆ. ಗಿರಿಜನ ಆಶ್ರಮ ಶಾಲೆಗಳನ್ನು 12ನೇ ತರಗತಿವರೆಗೆ ಮೇಲ್ದರ್ಜೆಗೇರಿಸಿ ಸಕಲ ಸೌಲಭ್ಯ ನೀಡುವಂತೆ ಸಚಿವರಿಗೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಆದಿವಾಸಿಗಳಿಗೆ ಸವಲತ್ತು ವಿತರಿಸಲಾಯಿತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಕಲ್ಲೇಶ್, ವಾಲ್ಮೀಕಿ ನಿಗಮದ ಪದ್ಮನಾಭ, ಜಂಟಿ ನಿರ್ದೇಶಕ ರಾಜಕುಮಾರ್, ನಾಗರಹೊಳೆ ಅಭಯಾರಣ್ಯದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಜಿಲ್ಲಾ ಸಮನ್ವಯಾಧಿಕಾರಿ ಮುನಿರಾಜು, ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಇಲಾಖೆಯ ಸುರೇಶ್, ತಾಲೂಕು ದಂಡಾಧಿಕಾರಿ ಸಣ್ಣರಾಮಪ್ಪ, ಚಕ್ಕೋಡನಹಳ್ಳಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ರಾಜೇಗೌಡ, ಬೇಗೂರು ಗ್ರಾಪಂ ಅಧ್ಯಕ್ಷ ಶೈಲೇಂದ್ರ, ಆದಿವಾಸಿ ಮುಖಂಡ ವಡ್ಡರಗುಡಿ ಚಿಕ್ಕಣ್ಣ, ವಿಜಯಕುಮಾರ್, ಮೈಮುಲ್ ನಿರ್ದೇಶಕ ಈರೇಗೌಡ, ಎಚ್.ಸಿ. ನರಸಿಂಹಮೂರ್ತಿ, ಇಒ ಧರಣೇಶ್, ವೆಂಕಟೇಶ್ ಪ್ರಸಾದ್ ಇದ್ದರು.