

ಅಥಣಿ: ಮುಂಬರುವ ಜಾತಿಗಣತಿ ಸಂದರ್ಭದಲ್ಲಿ ಆದಿಬಣಜಿಗ ಸಮುದಾಯದವರು ಜಾತಿ ಕಾಲಂನಲ್ಲಿ ಆದಿಬಣಜಿಗ ಬರೆಸಿದರೆ ಮಾತ್ರ ಸೌಲಭ್ಯ ದೊರೆಯುವ ಸಾಧ್ಯತೆ ಇದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಿವಣಗಿ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆದಿಬಣಜಿಗ ಯುವ ವೇದಿಕೆ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆದಿಬಣಜಿಗರು ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಯಿಸಬೇಕು ಎಂದು ಗೊಂದಲದಲ್ಲಿದ್ದಾರೆ. ಇದೇ ವೇಳೆ ಸರ್ಕಾರದ ಗೆಜೆಟ್ ಪಟ್ಟಿಯಲ್ಲೂ ಆದಿಬಣಜಿಗ ಜಾತಿ ಗುರುತಿಸಲಾಗಿಲ್ಲ. ಹೀಗಾಗಿ ಮುಂಬರುವ ಜಾತಿಗಣತಿಯಲ್ಲಿ ಎಲ್ಲರೂ ಜಾಗೃತರಾಗಿ ಆದಿಬಣಜಿಗ ಎಂದು ಬರೆಸಿದಾಗ ಅದು ಗೆಜೆಟ್‌ನಲ್ಲಿ ನಮೂದಾಗುತ್ತದೆ. ಆಗ ಸರ್ಕಾರಿ ಸೌಲಭ್ಯ ಸಿಗಲಿವೆ ಜತೆಗೆ ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳು, ಸರ್ಕಾರಿ ಇಲಾಖೆ ನೌಕರರು, ಸೇನೆಯಲ್ಲಿ ನಿವೃತ್ತರಾದವರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ರಾಜಣ್ಣ ಕೊರವಿ, ಗಂಗಾಧರ ಸಂಬಣ್ಣಿ, ಡಾ.ದಯಾನಂದ ಕರೆಣ್ಣನವರ ಮಾತನಾಡಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ, ಚಂದ್ರಶೇಖರ ಬಳ್ಳೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆದಿಬಣಜಿಗ ಯುವ ವೇದಿಕೆ ಅಧ್ಯಕ್ಷರಾಗಿ ರಾಜು ಆಲಬಾಳ ಪದಗ್ರಹಣ ಮಾಡಿದರು. ಶೇಖರ ನೇಮಗೌಡ, ಅಶೋಕ ಮಾರಾಪೂರ, ಅಪ್ಪಾಸಾಬ ತೆಲಸಂಗ, ಡಾ.ಮುರುಗೇಶ ಅವಟಿ, ವಿಜಯ ಹುದ್ದಾರ ಇತರರಿದ್ದರು.