ಆದಿಚುಂಚನಗಿರಿಯಲ್ಲಿ ಡಾ.ಕೆ.ಭೈರಪ್ಪಗೆ ಶ್ರದ್ಧಾಂಜಲಿ

image_6487327
Published on

ಮಂಡ್ಯ: ನಾಗಮಂಗಲ ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ಕೆ.ಭೈರಪ್ಪ (69) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಸೋಮವಾರ ನಿಧನರಾದರು.

ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸೋಮವಾರ ಸಂಜೆ ಬಿಜಿ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಮಂಗಳವಾರ ಹುಟ್ಟೂರು ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿವಿಯಿಂದ ಶ್ರದ್ಧಾಂಜಲಿ: ವಿಶ್ವವಿದ್ಯಾಲಯದ ವತಿಯಿಂದ ಬಿಜಿಎಸ್ ಸಭಾಂಗಣದಲ್ಲಿ ಡಾ. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕುಲಪತಿ ಡಾ.ಎಂ.ಎ.ಶೇಖರ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾನೋ ಟೆಕ್ನಾಲಜಿಯಲ್ಲಿ ಅಪಾರ ಸಾಧನೆಗೈದ ಟಾಪ್ 3 ವಿಜ್ಞಾನಿಗಳಲ್ಲಿ ಇವರು ಕೂಡ ಒಬ್ಬರು. ವಿವಿಧ ದೇಶಗಳಲ್ಲಿ ವಿದ್ಯಾಭ್ಯಾಸ ಮತ್ತು ಅಧ್ಯಾಪಕತ್ವದ ಅನುಭವ ಪಡೆದು ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ದೇಶ-ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಅನೇಕ ಗೌರವ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಇವರ ಅಕಾಲಿಕ ಮರಣದಿಂದ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪರೀಕ್ಷಾ ರಿಜಿಸ್ಟ್ರಾರ್ ಡಾ.ಪ್ರಾಣೇಶ್ ಗುಡೂರ್, ಮಠದ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ವಿವಿ ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಡಾ.ಬಿ.ಕೆ.ನರೇಂದ್ರ, ಡಾ.ರಮೇಶ್, ಡಾ.ಎ.ಟಿ.ಶಿವರಾಮು, ಪ್ರೊ ಎನ್.ರಾಮು, ಪ್ರೊ.ಚಂದ್ರಶೇಖರ್, ಡಾ.ಪ್ರಶಾಂತ್, ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net